ಲೋಕಬಂಧು ನ್ಯೂಸ್ ಬೆಂಗಳೂರು, ಸೆ.15
ಪ್ರಜಾಪ್ರಭುತ್ವ ಭಾರತದ ಆತ್ಮ. ಪ್ರಜೆಗಳೇ ಇಲ್ಲಿ ಪ್ರಭುಗಳು. ಭಾರತ ಪ್ರಜಾಪ್ರಭುತ್ವ ವಿಶ್ವಕ್ಕೇ ಮಾದರಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್'ನಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜಾತಿ, ಲಿಂಗ, ತಾರತಮ್ಯಗಳಿಲ್ಲದೆ ಎಲ್ಲರಿಗೂ ಅವಕಾಶ ನೀಡಿದ್ದನ್ನು ಇತಿಹಾಸದ ಪುಟಗಳ ಮೂಲಕ ನಾವು ಕಲಿತಿದ್ದೇವೆ. ಪ್ರಜಾಪ್ರಭುತ್ವದ ಆಶಯಗಳು ಶಾಶ್ವತವಾಗಿರಲಿ ಎಂದವರು ಆಶಿಸಿದರು.
ಯುವ ಸಂಸತ್ ನಿರ್ಮಾಣ
ಯುವ ಸಂಸತ್ ನಿರ್ಮಾಣ ಮಾಡುವ ಆಶಯದಿಂದ ಶಾಲಾ, ಕಾಲೇಜುಗಳಲ್ಲಿ ಮಾದರಿ ಸಂಸತ್ ನಡೆಸಲಾಗುವುದು. ಇದು ಬಸವಣ್ಣನವರ ಕಾಲದ ಅನುಭವ ಮಂಟಪದ ಚಿಂತನೆಗಳನ್ನು ಒಳಗೊಂಡಿದೆ. ವಿಶ್ವದ ಮೊದಲ ಸಂಸತ್ ಖ್ಯಾತಿಯ ಪಡೆದಿರುವ ಅನುಭವ ಮಂಟಪದ ತಿಳುವಳಿಕೆಯನ್ನು ಆ ಮೂಲಕ ನೀಡಲಾಗುವುದು ಎಂದರು.
ಪ್ರಜಾಪ್ರಭುತ್ವ ಕೇವಲ ಮತದಾನಕ್ಕೆ ಸೀಮಿತವಲ್ಲ. ಪ್ರಜಾಪ್ರಭುತ್ವ ಎಂದಾಗ ಚುನಾವಣೆ, ಮತದಾನ ಪಂಚಾಯತ್'ನಿಂದ ಸಂಸತ್ತಿನ ವರೆಗೆ ನಾಯಕರ ಆಯ್ಕೆ ಮಾತ್ರ ಪ್ರಜಾಪ್ರಭುತ್ವವಲ್ಲ. ಘನತೆ, ಗೌರವ ಮತ್ತು ಬದುಕುವ ಹಕ್ಕನ್ನು ನೀಡುವುದು ನೈಜ ಪ್ರಜಾಪ್ರಭುತ್ವ ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು. ಸಭಿಕರ ಜೊತೆ ಸಂವಿಧಾನ ಪೀಠಿಕೆ ಓದಿದರು. ನಂತರ ಯುವ ಸಂಸತ್ ಸಭೆ ಕಾರ್ಯಕ್ರಮದ ಲೋಗೋ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ಕೆ.ಎಚ್. ಮುನಿಯಪ್ಪ, ಶಿವರಾಜ್ ತಂಗಡಗಿ ಮತ್ತು ರಿಜ್ವಾನ್ ಅರ್ಷದ್, ಮಾಜಿ ಸಚಿವರಾದ ಶಾಸಕ ಎಚ್.ಸಿ.ಮಹಾದೇವಪ್ಪ, ಪಿ.ಟಿ. ಪರಮೇಶ್ವರ್ ನಾಯಕ್, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹ್ರೂಸ್ ಖಾನ್, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್, ಕರ್ನಾಟಕ ಪರಿಶಿಷ್ಟ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಭೋವಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮೊದಲಾದವರಿದ್ದರು.
ಸರ್ಕಾರಕ್ಕೆ ಹೆದರಿದರೆ ಸರ್ವಾಧಿಕಾರ
ಜನರು ಸರ್ಕಾರಕ್ಕೆ ಹೆದರಿದರೆ ಅದು ಸರ್ವಾಧಿಕಾರ. ಸರ್ಕಾರ ಜನರನ್ನು ಗೌರವಿಸಿದಾಗ ಪ್ರಜಾಪ್ರಭುತ್ವವಾಗುತ್ತದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಹಿರಿಯರು ನಮಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಸಿಎಂ ಡಿಕೆಶಿ ಹೇಳಿದರು.