ಜನಸಾಮಾನ್ಯರ ಮನೆ ಬಾಗಿಲಿಗೆ ಸರಕಾರದ ಸೌಲಭ್ಯ

ಲೋಕಬಂಧು ನ್ಯೂಸ್ | ಕಾಪು, ಸೆ.20
ರಾಜ್ಯ ಸರ್ಕಾರ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಅವರಿದ್ದಲ್ಲಿಯೇ ಮಾಡಿಕೊಡಲು ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಬಳಿ ಹೋಗಿ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಸಭೆ ಜಾರಿಗೆ ತಂದಿದೆ. ಸಾರ್ವಜನಿಕರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
ಪ್ರಜಾಸೇವೆ ಇಲಾಖೆ ಮತ್ತು ತಾಲೂಕು ಆಡಳಿತ ಕಾಪು ಸಹಯೋಗದೊಂದಿಗೆ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕಾಪು ತಾಲೂಕು ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು


ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಗ್ರಾಮೀಣ ಜನರ ಸಂಕಷ್ಟಕ್ಕೆ ನಿಗಧಿತ ಕಾಲಾವಧಿಯಲ್ಲಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸಿ, ಜನಸಾಮಾನ್ಯರ ಸಮಸ್ಯೆ ಹಾಗೂ ಅಹವಾಲುಗಳಿಗೆ ಪರಿಹಾರ ಕಲ್ಪಿಸಲಾಗುತ್ತಿದೆ.


ಜನಪ್ರತಿಧಿಗಳು ಹಾಗೂ ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಪ್ರಜಾಸೇವಾ ಆಂದೋಲಸಭೆಗಳ ಮೂಲಕ ಜನರ ಬಳಿಗೆ ಬಂದು ಅವರ ಅಹವಾಲುಗಳನ್ನು ಅವರಿರುವಲ್ಲಿಯೇ ಆಲಿಸಿ, ಸ್ಥಳೀಯ ಸಮಸ್ಯೆಗಳಿಗೆ ತಮ್ಮ ಹಂತದಲ್ಲಿ ಪರಿಹಾರ ನೀಡುತ್ತಿದ್ದಾರೆ ಎಂದರು.


ಕರಾವಳಿ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಕರಾವಳಿ ಭಾಗದ ಸಮಸ್ಯೆ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಗಿದೆ.


ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯಿಂದ ಜನರು ಆತಂಕಕ್ಕೆ ಒಳಗಾದ ಹಿನ್ನೆಲೆಯಲ್ಲಿ ಆ ಸಮಸ್ಯೆ ಆಲಿಸಲು ಸ್ವತಃ ಮುಖ್ಯಮಂತ್ರಿ ಶುಕ್ರವಾರ ಹೆಬ್ರಿಗೆ ಆಗಮಿಸಿ ಬಂದು ಗ್ರಾಮಗಳ ಜನತೆಯ ಅಹವಾಲು ಆಲಿಸಿದ್ದಾರೆ. ಉತ್ತಮ ಪರಿಹಾರ ಕಂಡುಕೊಳ್ಳಲು ನಾವು ಬದ್ಧ ಎಂದರು.


ಕರಾವಳಿ ಭಾಗಕ್ಕೆ ಪ್ರವಾಸೋದ್ಯಮವೇ ದೊಡ್ಡ ಶಕ್ತಿ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸ್ಥಳೀಯ ಯುವಕರು ದೇಶ- ವಿದೇಶಗಳಿಗೆ ಉದ್ಯೋಗಗಳಿಗಾಗಿ ತೆರಳುವುದು ತಪ್ಪಲಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬೆಳೆಸಿ, ಎಲ್ಲಾ ಜಾತಿ- ಧರ್ಮದವರು ಸಾಮರಸ್ಯದಿಂದ ಬಾಳುವ ವಾತಾವರಣ ಸೃಷ್ಟಿಸುವ ಜೊತೆಗೆ ಅಭಿವೃದ್ಧಿ ಕಾರ್ಯ ಕೈಗೊಂಡಾಗ ಪ್ರಪಂಚಕ್ಕೆ ಕರಾವಳಿ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.


ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸಾರ್ವಜನಿಕರ ಹಿತರಕ್ಷಣೆ ಕಾಪಾಡಲು ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಅದನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗಬೇಕು. ಸರಕಾರ ಮತ್ತು ಸಮಾಜದ ನಡುವೆಯಾಗಿ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ವ್ಯವಸ್ಥಿತ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.


ಪ್ರಜಾಸೇವಾ ಆಂದೋಲನ ಸಭೆಗಳು ಆಂದೋಲನ ರೀತಿಯಲ್ಲಿ ನಡೆದ್ದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಭೆಯಲ್ಲಿ ನಡೆದ ವಿಷಯಗಳು ಬಗ್ಗೆ ಅನುಪಾಲನ ವರದಿಯ ಆಧಾರದ ಮೇಲೆ ಕ್ರಮವಹಿಸಲು ಮುಂದಾಗಬೇಕು ಎಂದರು.


ಪ್ರಜಾಸೇವೆ ಆಂದೋಲನ ಸಭೆಗಳಲ್ಲಿ ಕೇವಲ ಅರ್ಜಿ ಪಡೆದು ಹಿಂಬರಹ ಕೊಡುವುದು ಮಾತ್ರವಲ್ಲ. ಅದಕ್ಕೆ 21 ದಿನಗಳೊಳಗಾಗಿ ಅಧಿಕಾರಿಗಳು ಪರಿಹಾರ ನೀಡಬೇಕು. ಒಂದೊಮ್ಮೆ ಪರಿಹಾರ ಸಿಗದ ಸಮಸ್ಯೆಗಳಿಗೆ ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗುವುದು ಎಂದರು.


ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಪ್ರತಿಯೊಂದು ಹಳ್ಳಿಯ ಕಟ್ಟಕಡೆಯ ವ್ಯಕ್ತಿಗಳ ಸಮಸ್ಯೆಯನ್ನು ಆಲಿಸಿ, ಪರಿಹಾರ ಕಲ್ಪಿಸುವುದರೊಂದಿಗೆ ಅವರ ಮನೆ ಬಾಗಿಲಿಗೆ ಸರಕಾರದ ಯೋಜನೆಗಳನ್ನು ತಲುಪಿಸುವ ಉದ್ದೇಶದದಿಂದ ರಾಜ್ಯ ಸರಕಾರ ದೂರದೃಷ್ಟಿಯೊಂದಿಗೆ ಪ್ರಜಾಸೇವಾ ಆಂದೋಲನ ಸಭೆ ಜಾರಿಗೊಳಿಸಿದೆ.


ಪ್ರಜಾಸೇವೆ ಆಂದೋಲನ ಸಭೆಗಳನ್ನು ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಆಯೋಜಿಸಿ, ಕೌಂಟರ್ ಗಳನ್ನು ಸ್ಥಾಪಿಸಿ, ಅವರ ಅಹವಾಲು ಸ್ವೀಕರಿಸುವುದರೊಂದಿಗೆ ಅವರ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.


ಪ್ರತಿಯೊಂದು ತಿಂಗಳ ಒಂದನೇ ಹಾಗೂ ಮುರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಎರಡು ಮತ್ತು ನಾಲ್ಕನೆಯ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿದ್ದು, ಪ್ರತಿ ಬುಧವಾರ ಜಿಲ್ಲಾಧಿಕಾರಿ ಹಂತದಲ್ಲಿ ಇತರ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಸ್ವೀಕರಿಸಲಾದ ಅರ್ಜಗಳಿಗೆ ಗುಣಾತ್ಮಕ ಪರಿಹಾರ ನೀಡಲಾಗಿದೆಯೇ ಎಂದು ಪರಿಶೀಲನೆ ನಡೆಸಲಿದ್ದೇವೆ ಎಂದರು.


ಇದೇ ಸಂದರ್ಭದಲ್ಲಿ ಕೃಷಿ ಮೇಳ -2026ರ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ದಿವ್ಯಾಂಗರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಬ್ಯಾಟರಿ ಚಾಲಿತ ವ್ಹೀಲ್ ಚೇರ್, ಹೊಲಿಗೆ ಯಂತ್ರ, ಟಾಕಿಂಗ್ ಲ್ಯಾಪ್‌ಟಾಪ್ ಮತ್ತು ಡಿ.ದೇವರಾಜ ಅರಸು ನಿಗಮದ ವತಿಯಿಂದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.


ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂದೂರಿ ದಾಸರಿ, ಕಾಪು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ, ಕಾಪು ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಕಾಪು ನಗರ ಪ್ರಾಧಿಕಾರ ಅಧ್ಯಕ್ಷ ವಿಕ್ರಮ್ ಕಾಪು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


ಕಾಪು ತಹಶೀಲ್ದಾರ್ ಅನಂತ ಶಂಕರ್ ಬಿ. ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.

75 ಅರ್ಜಿ ಸಲ್ಲಿಕೆ
ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 75 ಅರ್ಜಿಗಳು ಸಲ್ಲಿಕೆಯಾಗಿದ್ದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತೋಟಗಾರಿಕೆ, ವಿಬಿಜಿ ರಾಮ್ ಜಿ ಯೋಜನೆ, ಕೃಷಿ ಇಲಾಖೆ ಮತ್ತಿತರ ಇಲಾಖೆಗಳ ಮಳಿಗೆ ತೆರೆದು ಇಲಾಖೆ ವತಿಯಿಂದ ನೀಡಲಾಗುವ ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ನೀಡಲಾಯಿತು.