ಲೋಕಬಂಧು ನ್ಯೂಸ್ ಉಡುಪಿ, ಸೆ.14
ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ಬಾದ್ರಪದ ಶುಕ್ಲ ಚತುರ್ಥಿ ಪರ್ವಕಾಲದಲ್ಲಿ ಸೋಮವಾರ ಶ್ರೀಕೃಷ್ಣ ಮಠದಲ್ಲಿ ಗಣೇಶ ಚತುರ್ಥಿ ಮಹೋತ್ಸವವನ್ನು ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಬಡಗುಮಾಳಿಗೆಯಲ್ಲಿ ಗಣೇಶ ವಿಗ್ರಹದ ಪ್ರತಿಷ್ಠಾಪನೆ ನೆರವೇರಿಸಲಾಯಿತು.ಸಾಂಪ್ರದಾಯಿಕವಾಗಿ ಗಣೇಶ ವಿಗ್ರಹವನ್ನು ರಥಬೀದಿಯಲ್ಲಿ ಮೆರವಣಿಗೆ ಮೂಲಕ ತರಲಾಯಿತು.ಶಾಸ್ತ್ರೋಕ್ತ ರೀತಿಯಲ್ಲಿ ವಿಧಿವತ್ತಾಗಿ ಮಠದ ಪುರೋಹಿತ ಸುದರ್ಶನ ಭಟ್ ಪ್ರತಿಷ್ಠೆಯ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.ಪ್ರತಿಷ್ಠಿತ ಗಣೇಶ ವಿಗ್ರಹಕ್ಕೆ ಮಧ್ಯಾಹ್ನ ಪರ್ಯಾಯ ಪೀಠಾಧೀಶ ಶೀರೂರು ಮಠಾಧಿಪತಿ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಹಾಪೂಜೆ ನೆರವೇರಿತು.ಈ ಸಂದರ್ಭದಲ್ಲಿ ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು, ಕೊಟ್ಟಾರಿ ರಾಮಚಂದ್ರ ಕೊಡಂಚ ಮೊದಲಾದವರಿದ್ದರು.