ಲೋಕಬಂಧು ನ್ಯೂಸ್ | ಉಡುಪಿ, ಸೆ.15
ಕರ್ನಾಟಕದ ಪ್ರಾಚೀನ ಹಾಗೂ ಶ್ರೀಮಂತ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೆ ರಾಜ್ಯದ ಹೆಚ್ಚುವರಿ ಎರಡನೇ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ನೀಡಬೇಕು ಎಂದು ಅಳುಪ ವಂಶಸ್ಥ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಾ.ಆಕಾಶ್ ಜೈನ್ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಲು ಕಾನೂನಿನಲ್ಲಿ ಅವಕಾಶವಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಭಾಷೆಗಳಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ನಿದರ್ಶನಗಳಿವೆ. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ತುಳುವಿಗೂ ಪ್ರತ್ಯೇಕ ರಾಜ್ಯ ರಚಿಸುವ ಅವಕಾಶವಿತ್ತು. ಆದರೆ, ಸೂಕ್ತ ಪ್ರಾತಿನಿಧ್ಯ ಹಾಗೂ ಸ್ಥಾನಮಾನ ಕಲ್ಪಿಸುವ ಭರವಸೆಯ ಹಿನ್ನೆಲೆಯಲ್ಲಿ ತುಳುವರು ಪ್ರತ್ಯೇಕ ಪ್ರಾಂತ್ಯದ ಬೇಡಿಕೆ ಮುಂದೂಡಿದ್ದರು ಎಂದರು.
ತುಳು ಮಹಾ ದ್ರಾವಿಡ ಪುರಾತನ ಭಾಷೆಯಾಗಿದ್ದು, ಕನ್ನಡದೊಂದಿಗೆ ಸಾವಿರಾರು ವರ್ಷಗಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯ ಹೊಂದಿದೆ. ಸ್ವಾತಂತ್ರ್ಯದ 80ನೇ ವರ್ಷಕ್ಕೆ ಕಾಲಿಡುತ್ತಿದ್ದರೂ ತುಳು ಭಾಷೆಗೆ ಇದುವರೆಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂದವರು ವಿಷಾದಿಸಿದರು.
ತುಳುವನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡರೆ ಭಾಷೆಯ ಸಂರಕ್ಷಣೆ, ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಪೂರಕವಾದ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ಹಾಗಾಗಿ ರಾಜ್ಯ ಸರ್ಕಾರ ತುಳುವಿಗೆ ಹೆಚ್ಚುವರಿ ಎರಡನೇ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ, ತುಳು ಭಾಷೆಯನ್ನು ಕರಾವಳಿ ಕರ್ನಾಟಕ ಮಾತ್ರವಲ್ಲದೆ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಮಾತನಾಡುತ್ತಿದ್ದಾರೆ. ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ಕಲ್ಪಿಸುವಂತೆ ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದರು.
ಉಡುಪಿ ಸಿರಿ ತುಲು ಚಾವಡಿ ಕಾರ್ಯದರ್ಶಿ ಈಶ್ವರ್ ಶೆಟ್ಟಿ ಚಿಟ್ಪಾಡಿ, ಜೈ ತುಳುನಾಡು ಒಡಿಪು ಘಟಕದ ಅಧ್ಯಕ್ಷ ಸಂತೋಷ್ ಎನ್.ಎಸ್. ಕಟಪಾಡಿ ಮತ್ತು ಕೋಶಾಧಿಕಾರಿ ಅಂಬಿಕಾ ರಾವ್ ಉಪಸ್ಥಿತರಿದ್ದರು.
