ಲೋಕಬಂಧು ನ್ಯೂಸ್ | ಮಣಿಪಾಲ, ಸೆ.12
ಮಣ್ಣಿನಿಂದ ನಿರ್ಮಿಸಲಾದ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವುದರೊಂದಿಗೆ ಶ್ರದ್ಧಾಭಕ್ತಿಯಿಂದ ಪರಿಸರ ಸ್ನೇಹಿ ಗೌರಿ- ಗಣೇಶ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚಿಸಿದ್ದಾರೆ.
ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣೇಶನ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸುವುದರೊಂದಿಗೆ ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಹಕರಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳು ನೈಸರ್ಗಿಕವಾಗಿ ನೀರಿನಲ್ಲಿ ಕರಗದೆ ಮಾಲಿನ್ಯ ಉಂಟುಮಾಡುವುದರೊಂದಿಗೆ ಜಲಚರಗಳಿಗೆ ಹಾನಿ ಉಂಟುಮಾಡುತ್ತವೆ. ಅದಕ್ಕೆ ಆಸ್ಪದ ನೀಡಬಾರದು ಎಂದರು.
ನೈಸರ್ಗಿಕ ಜಲಮೂಲಗಳ ಮೇಲಿನ ಒತ್ತಡ ಕಡಿಮೆ ಮಾಡಲು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿರುವ ತಾತ್ಕಾಲಿಕ/ ಕೃತಕ ವಿಸರ್ಜನಾ ತೊಟ್ಟಿಗಳಲ್ಲಿ ವಿಗ್ರಹಗಳನ್ನು ವಿಸರ್ಜಿಸಬೇಕು. ವಿಸರ್ಜನೆ ಸಂದರ್ಭದಲ್ಲಿ ಹಸಿ ಕಸ ಹಾಗೂ ಒಣ ಕಸವನ್ನು ನೀರಿಗೆ ಎಸೆಯದೆ ಪ್ರತ್ಯೇಕವಾಗಿ ವಿಂಗಡಿಸಿ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಬೇಕು. ನದಿ, ಕೆರೆ, ಕೊಳ ಅಥವಾ ಇತರ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜನೆ ಅನಿವಾರ್ಯವಾದಲ್ಲಿ ನಿಗದಿತ ಸ್ಥಳಗಳಲ್ಲಿ ಸುರಕ್ಷತಾ ವ್ಯವಸ್ಥೆಗಳೊಂದಿಗೆ ಮೌಲಭೂತ ಸೌಕರ್ಯ ನಿಗದಿಪಡಿಸಿ, ರಕ್ಷಣಾ ತಂಡ ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು ಎಂದರು.
ಪಿಓಪಿ ಮೂರ್ತಿಗಳ ತಯಾರಿ ಹಾಗೂ ಮಾರಾಟ ತಡೆಗಟ್ಟಲು ಹಬ್ಬಕ್ಕೆ ಮುಂಚಿತವಾಗಿಯೇ ಮೂರ್ತಿ ತಯಾರಿಕಾ ಘಟಕಗಳು, ಸಂಗ್ರಹಣಾ ಗೋದಾಮುಗಳು ಮತ್ತು ಮಾರಾಟ ಕೇಂದ್ರಗಳ ತಪಾಸಣೆ ನಡೆಸಬೇಕು. ಒಂದೊಮ್ಮೆ ಪಿಓಪಿ ಬಳಸಿ ತಯಾರಿಸಿದ ಮೂರ್ತಿಗಳ ಸಂಗ್ರಹಣೆ, ಮಾರಾಟ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು.
ಸಾರ್ವಜನಿಕವಾಗಿ ಇಡಲಾಗುವ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವಾಗ ಸಮಿತಿಯವರು ಸ್ಥಳೀಯ ಸಂಸ್ಥೆಗಳಿಂದ ಮತ್ತು ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಗಣೇಶೋತ್ಸವ ಸಂದರ್ಭದಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆ, ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯ ತನಕ ಧ್ವನಿವರ್ಧಕಗಳ ಬಳಕೆ ಹಾಗೂ ಗಣೇಶ ವಿಗ್ರಹಗಳ ವಿಸರ್ಜನೆ ಸಂದರ್ಭದಲ್ಲಿ ಹಸಿರು ಪಟಾಕಿ ಹೊರತಾಗಿ ಇತರ ಯಾವುದೇ ಪಟಾಕಿ ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.
ಶಾಲಾ ಕಾಲೇಜು, ಸಾಮಾಜಿಕ ಜಾಲತಾಣ ಹಾಗೂ ಸರ್ಕಾರೇತರ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಪ್ಲಾಸ್ಟರ್ ಆಪ್ ಪ್ಯಾರಿಸ್ ಮೂರ್ತಿಗಳಿಂದ ಆಗುವ ಅಪಾಯಗಳ ಕುರಿತು ಮತ್ತು ಪರಿಸರ ಸ್ನೇಹಿ ಮೂರ್ತಿಗಳ ಬಳಕೆ ಕುರಿತು ಜಾಗೃತಿ ಮೂಡಿಸಬೇಕು.
ಗಣೇಶ ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿದ್ಯುತ್ ತಂತಿಗಳಿಂದ ಯಾವುದೇ ಅವಘಡಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎ.ಎಸ್.ಪಿ. ಸುಧಾಕರ್ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಉದಯ್ ಶೆಟ್ಟಿ, ಜಿಲ್ಲಾ ಪರಿಸರ ಅಧಿಕಾರಿ ಡಾ.ಮಹೇಶ್ವರಿ ಸಿಂಗ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರ್'ಗಳು, ಇ.ಓಗಳು ಮೊದಲಾದವರಿದ್ದರು.
