ಮನುಸ್ಮೃತಿ ಮನಃಸ್ಥಿತಿಯ ದಲಿತರ ಮೂಲಕ ಅಪಮಾನ

ಲೋಕಬಂಧು ನ್ಯೂಸ್ | ಉಡುಪಿ, ಸೆ.12
ಮನುಸ್ಮೃತಿಯ ಮನಃಸ್ಥಿತಿಯ ದಲಿತರ ಮೂಲಕ ಭಾರತದ ಸಂವಿಧಾನಕ್ಕೆ ಅಪಮಾನ ಮಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಆರೋಪಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವುದನ್ನು ಖಂಡಿಸಿ ಕೆಪಿಸಿಸಿ ಪ್ರಚಾರ ಸಮಿತಿ ವತಿಯಿಂದ ಅಜ್ಜರಕಾಡು ಗಾಂಧಿ ಪ್ರತಿಮೆ ಎದುರು ಶನಿವಾರ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.


ಬಿಜೆಪಿಯವರೇ ಸೃಷ್ಟಿಸಿರುವ ದಲಿತರ ಮೂಲಕ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಮಾನ ಮಾಡಲಾಗುತ್ತಿದೆ. ಅದನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಭಟ್ ಸಮರ್ಥಿಸಿಕೊಂಡಿರುವುದು ದುರದೃಷ್ಟಕರ.


ಇಂಥ ಬೆಳವಣಿಗೆಗಳು ದೇಶವನ್ನು ಮತ್ತೆ 18ನೇ ಶತಮಾನಕ್ಕೆ ಕೊಂಡೊಯ್ಯುವ ಪ್ರಯತ್ನವಾಗಿದೆ. ಸಮಾಜದಲ್ಲಿರುವ ಅಸಮಾನತೆ, ಮೇಲು-ಕೀಳು ಹಾಗೂ ಅಸ್ಪೃಶ್ಯತೆಗಳನ್ನು ದೇವರು ಸೃಷ್ಟಿಸಿಲ್ಲ, ಮನುಷ್ಯರೇ ಸೃಷ್ಟಿಸಿದ್ದಾರೆ.


ದೇಶದ ಮೂಲ ನಿವಾಸಿಗಳಾದ ದಲಿತರನ್ನು ಅಸ್ಪೃಶ್ಯತೆ ಹೆಸರಿನಲ್ಲಿ ಶೋಷಿಸುವ ಪ್ರಯತ್ನ ನಡೆಯುತ್ತಿದೆ. ದೇಶದಲ್ಲಿ 50 ಸಾವಿರಕ್ಕೂ ಅಧಿಕ ದಲಿತರ ಮೇಲೆ ಅನ್ಯಾಯ ನಡೆಯುತ್ತಿದ್ದರೂ ಅದನ್ನು ಬಿಜೆಪಿ ಸಮರ್ಥಿಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಸೊರಕೆ ವಿಷಾದಿಸಿದರು.


ಮನ್ ಕಿ ಬಾತ್'ನಲ್ಲಿ ವಿವಿಧ ವಿಷಯಗಳ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ರಾಮ ಮಂದಿರದ ಹಣದ ದುರ್ಬಳಕೆ ಆರೋಪದ ಕುರಿತು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ಸೊರಕೆ, ಪ್ರಧಾನಿ ಮೋದಿ ಅವರ 'ನಾ ಖಾವುಂಗಾ, ನಾ ಖಾನೇ ದೂಂಗಾ' ಘೋಷಣೆ ಎಲ್ಲಿ ಹೋಯಿತು ಎಂದು ಲೇವಡಿ ಮಾಡಿದರು.
ಪ್ರತಿಭಟನೆಯಲ್ಲಿ ಗಾಂಧೀಜಿ ಪ್ರತಿಮೆಗೆ ಹೂಹಾರ ಹಾಕುವ ಮೂಲಕ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.
ಬೈಂದೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಮಾತನಾಡಿ, ದಲಿತರನ್ನು ದಲಿತರಿಂದಲೇ ಪ್ರತ್ಯೇಕಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆ ಮೂಲಕ ದಲಿತರನ್ನೇ ಬಳಸಿಕೊಂಡು ಮತ್ತೊಬ್ಬ ದಲಿತರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಪೊಲೀಸರನ್ನು ಬಳಸಿಕೊಂಡು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.


ಕಾಂಗ್ರೆಸ್ ಇಂಥ ಪ್ರಕರಣಗಳಿಗೆ ಹೆದರುವುದಿಲ್ಲ. ಪೊಲೀಸರ ಮೂಲಕ ದೇಶದಲ್ಲಿ ದಲಿತರನ್ನು ದಮನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.


ಬಿಜೆಪಿ ವೈರಸ್ ಇದ್ದಂತೆ. ಎಷ್ಟು ಆ್ಯಂಟಿಬಯಾಟಿಕ್ ಕೊಟ್ಟರೂ ಬೇರೆ ಬೇರೆ ರೂಪದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ ಎಂದು ವ್ಯಂಗ್ಯವಾಡಿದ ಅವರು, ದೇಶದ ಯುವಜನತೆ ಒಪ್ಪಿಕೊಳ್ಳುತ್ತಿರುವ ನಾಯಕ ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ತುಳಿಯುವ ಉದ್ದೇಶದಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಬಿಜೆಪಿಯವರು ಎಷ್ಟೇ ಪ್ರಯತ್ನಿಸಿದರೂ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಅವರ ನೈತಿಕ ಬಲವನ್ನು ಕುಗ್ಗಿಸಲು ಸಾಧ್ಯವಿಲ್ಲ.


ಬಾಡಿಗೆ ಗೂಂಡಾಗಳನ್ನು ಕರೆತಂದು ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ಕಾಂಗ್ರೆಸ್ ಇಂಥ ಮಾರ್ಗವನ್ನು ಎಂದಿಗೂ ಅನುಸರಿಸಿಲ್ಲ. ದಲಿತ ಸಂಘಟನೆಗಳ ಕಾರ್ಯಕರ್ತರಿಗೆ ತಪ್ಪು ಮಾಹಿತಿ ನೀಡಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೇಶಭಕ್ತ ದಲಿತ ನಾಯಕರನ್ನು ಪ್ರತ್ಯೇಕಿಸುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಅನುಸರಿಸುತ್ತಿರುವ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.


ದೇಶದ ಅಖಂಡತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಮಾನ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಬ್ರಹ್ಮಣ್ಯ ಭಟ್ ಆಗ್ರಹಿಸಿದರು.


ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮನುಷ್ಯರು ನಿಜವಾದ ಮನುಷ್ಯರಾಗಿ ಬದುಕುವ ಅಗತ್ಯವಿದೆ. ಆದರೆ, ನಾವಿಂದು ಮಾನವರಾಗುವ ಬದಲು ದಾನವರಾಗುತ್ತಿರುವುದು ವಿಷಾದನೀಯ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಬಿಜೆಪಿಯವರು ಕೇವಲ ಮೈದಾನವನ್ನು ಶುಚಿಗೊಳಿಸುವುದಲ್ಲ, ಅವರ ಅಂತರಂಗ ಹಾಗೂ ಮನಃಸ್ಥಿತಿಯೂ ಶುದ್ಧವಾಗಬೇಕಿದೆ ಎಂದು ವ್ಯಂಗ್ಯವಾಡಿದ ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ತಪ್ಪುಗಳನ್ನು ಎತ್ತಿಹಿಡಿದು ಪ್ರಶ್ನಿಸಿದರೆ ಅಂಥವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತದೆ. ಆದರೆ, ಬಿಜೆಪಿಯವರನ್ನು ಹೊಗಳಿದರೆ ದೇಶಪ್ರೇಮಿಗಳೆಂದು ಕರೆಯಲಾಗುತ್ತದೆ ಎಂದು ಟೀಕಿಸಿದರು.


ಸುದರ್ಶನ್ ಮತ್ತು ಬಳಗದವರು 'ರಘುಪತಿ ರಾಘವ' ಹಾಗೂ 'ವೈಷ್ಣವ ಜನತೋ' ಭಜನೆ ಹಾಡುವ ಮೂಲಕ ಗಾಂಧಿ ಸ್ಮೃತಿ ಮಾಡಿದರು.

ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಕಾಂಗ್ರೆಸ್ ಪ್ರಮುಖರಾದ ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಹರಿಪ್ರಸಾದ್ ರೈ, ಪ್ರಖ್ಯಾತ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಜ್ಯೋತಿ ಹೆಬ್ಬಾರ್ ಮೊದಲಾದವರಿದ್ದರು.