ಕಸ್ತೂರಿ ರಂಗನ್ ವರದಿ ಜಾರಿಯಿಂದ ಭೂಹಕ್ಕಿಗೆ ಧಕ್ಕೆ

ಲೋಕಬಂಧು ನ್ಯೂಸ್ | ಉಡುಪಿ, ಸೆ.15
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳ ನಿವಾಸಿಗಳಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 18ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೆಬ್ರಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ವರದಿಯಿಂದ ಬಾಧಿತ ಪ್ರದೇಶಗಳ ಜನರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಗುವುದು ಎಂದರು.


ಕಾರ್ಕಳ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳು ವರದಿಯ ವ್ಯಾಪ್ತಿಗೆ ಸಿಲುಕುವ ಸಾಧ್ಯತೆ ಇದೆ. ನೂರಾರು ವರ್ಷಗಳಿಂದ ಭತ್ತ, ಅಡಿಕೆ, ತೆಂಗು, ಕಾಳುಮೆಣಸು, ತರಕಾರಿ, ರಬ್ಬರ್ ಮೊದಲಾದ ಬೆಳೆಗಳನ್ನು ಬೆಳೆಯುತ್ತಾ ಬದುಕುತ್ತಿರುವ ಕೃಷಿಕರು ಕೇಂದ್ರದ ಅಧಿಸೂಚನೆಯಿಂದ ಆತಂಕಿತರಾಗಿದ್ದಾರೆ. ಸ್ಥಳೀಯರ ಭೂಹಕ್ಕಿಗೆ ಧಕ್ಕೆ ಬರದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.


ಸ್ಥಳೀಯರ ಅಹವಾಲು ಆಲಿಸದೆ, ಗ್ರಾಮಸಭೆಗಳನ್ನು ನಡೆಸದೆ ಕೇವಲ ವೈಮಾನಿಕ ಸಮೀಕ್ಷೆ ಆಧರಿಸಿ ವರದಿ ರೂಪಿಸಿರುವುದು ಖಂಡನೀಯ. ಪಶ್ಚಿಮ ಘಟ್ಟ ಸಂರಕ್ಷಣೆಯ ಜೊತೆಗೆ ಅಲ್ಲಿನ ಜನರ ಹಿತವನ್ನೂ ಗಮನಿಸಬೇಕು ಎಂದು ಹೇಳಿದರು.


ಕರಾವಳಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕು. ತುಳು ಭಾಷೆಗೆ ಅಧಿಕೃತ ರಾಜ್ಯಭಾಷೆ ಸ್ಥಾನಮಾನ ನೀಡುವುದು, ಎಂಟನೇ ಪರಿಚ್ಛೇಧಕ್ಕೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹೇರುವುದು ಹಾಗೂ ತುಳು ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಲಾಗುವುದು. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದರು.


ಸುದ್ದಿಗೋಷ್ಠಿಯಲ್ಲಿ ಗೋಪಿನಾಥ್ ಭಟ್, ಯೋಗೀಶ್ ಆಚಾರ್ಯ, ಪ್ರದೀಪ್ ಬೇಲಾಡಿ, ಅಜಿತ್ ಹೆಗ್ಡೆ, ಅನಿಲ್ ಪೂಜಾರಿ ಮಾಳ, ಬಾನು ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು.