ಭಜನೆಯ ಮೂಲಕ ಸಂಸ್ಕಾರದ ಪ್ರಜನನ

ಲೋಕಬಂಧು ನ್ಯೂಸ್ ಉಜಿರೆ
ಪ್ರಸ್ತುತ ಶಿಕ್ಷಣದಲ್ಲಿ ಸಂಸ್ಕಾರದ ಬಹಳ ಆವಶ್ಯಕತೆಯಿದ್ದು, ಜೀವನದ ಸಾರ್ಥಕತೆಗೆ ಕಾರಣವಾಗುವ ಸಂಸ್ಕಾರವನ್ನು ಭಜನೆಯ ಮುಖೇನ ಒಲಿಸಿಕೊಳ್ಳಬಹುದಾಗಿದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಬುಧವಾರ ನಡೆದ 28ನೇ ವರ್ಷದ ಭಜನಾ ಕಮ್ಮಟದ ಮೂರನೇ ದಿನದ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದರು.


ಇಂದಿನ ಕಾಲದ  ಯುವ ಸಮಾಜ ವ್ಯಾವಹಾರಿಕ ಜೀವನ ಮತ್ತು ಸಂಪಾದನೆಯ ಬದುಕಿನ ನಡುವೆ ಸಂಸ್ಕಾರವನ್ನು ಮರೆಯುತ್ತಿದ್ದು, ಆ ಸಂಸ್ಕಾರದ ಪುನಶ್ಚೇತನಕ್ಕೆ ಭಗವಂತನ ಸ್ಮರಣೆ ಸಹಕಾರಿ. ವ್ಯಸನಗಳ ಭೀತಿಗೆ ಸಂಸ್ಕಾರದ ಕೊರತೆಯೇ ಕಾರಣವಾಗಿದ್ದು, ಅಲ್ಲದೆ ಮಕ್ಕಳ ಮೇಲಿನ ಅತಿಯಾದ ಮೋಹ ವಾತ್ಸಲ್ಯಗಳೂ ಇಂದು ಸಂಸ್ಕಾರವನ್ನು ಮರೆಮಾಚುವಂತೆ ಮಾಡುತ್ತಿದೆ ಎಂದರು.


ಭಾರತದ ಅಸ್ಮಿತೆಗೆ ಒಬ್ಬ ಉತ್ತಮ ವ್ಯಕ್ತಿಯಾಗಬೇಕಾದರೆ ಸಂಸ್ಕಾರವು ಅತೀ ಮುಖ್ಯವಾಗಿದ್ದು, ಆ ಸಂಸ್ಕಾರವನ್ನು ಒದಗಿಸುವ ಭಜನೆಗೆ ಅತಿ ಹೆಚ್ಚಿನ ಕೊಡುಗೆ  ನೀಡಿದ ಕೀರ್ತಿ ದಾಸ ಪರಂಪರೆಗೆ ಸಲ್ಲುತ್ತದೆ ಎಂದರು.


ಆತ್ಮ ಆಧ್ಯಾತ್ಮದ ದಾರಿಯಲ್ಲಿ ಪರಮಾತ್ಮನ ಕಡೆ ಸಾಗಲು ಭಜನೆ ಸನ್ಮಾರ್ಗವಾಗಿದ್ದು, ಡಾ.ಹೆಗ್ಗಡೆಯವತು 28 ವರ್ಷಗಳ ಭಜನಾ ಕಮ್ಮಟದ ಮೂಲಕ ಸಮಾಜದಲ್ಲಿ ಅನೇಕ ಧಾರ್ಮಿಕ ಬದಲಾವಣೆಯನ್ನು ತಂದು ಯುವ ಪೀಳಿಗೆಯನ್ನು ಆಧ್ಯಾತ್ಮದ ಕಡೆಗೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ  ಭಜನಾ ಕಮ್ಮಟ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್,  ಸಮಿತಿ ಕಾರ್ಯದರ್ಶಿ ವೀರು ಶೆಟ್ಟಿ, ಭಜನಾ ಕಮ್ಮಟ ಸಮಿತಿಯ ಸರ್ವ ಸದಸ್ಯರು ಹಾಗೂ ಶಿಬಿರಾರ್ಥಿಗಳು ಭಾಗಿಯಾಗಿದ್ದರು.

ರಾಜ್ಯ‌ ಮಟ್ಟದ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ  ಭಜನಾ ತರಬೇತಿ ನೀಡಿದರು.


ಈ ಸಂದರ್ಭದಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಭಜನಾ ಕಮ್ಮಟ ಪರಿಷತ್ ಉಪಾಧ್ಯಕ್ಷೆ ಡಾ. ಹೇಮಾವತಿ ಹೆಗ್ಗಡೆ, ಐಶ್ವರ್ಯ ನಿಶ್ಚಲ್ ಜೈನ್ ಇದ್ದರು.