ಲೋಕಬಂಧು ನ್ಯೂಸ್ | ಮಣಿಪಾಲ, ಸೆ.15
ಮೂರು ತಿಂಗಳ ಹಸುಗೂಸಿನ ಯಕೃತ್ತಿನಲ್ಲಿದ್ದ ಅಪರೂಪದ ಕ್ಯಾನ್ಸರ್ ಗೆಡ್ಡೆಯನ್ನು ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ (ಕೆಎಂಸಿ)ಯ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದು, ಮೂರು ವರ್ಷಗಳ ಬಳಿಕವೂ ಮಗು ಸಂಪೂರ್ಣ ಕ್ಯಾನ್ಸರ್ ಮುಕ್ತವಾಗಿ ಆರೋಗ್ಯದಿಂದ ಬೆಳೆಯುತ್ತಿದೆ.
ಮಗುವಿನ ಯಕೃತ್ತು ದೊಡ್ಡದಾಗಿದ್ದು, ಕ್ಯಾನ್ಸರ್ ಸೂಚಕ ಆಲ್ಫಾ-ಫೆಟೊಪ್ರೊಟೀನ್ (ಎಎಫ್ಪಿ) ಪ್ರಮಾಣ ಹೆಚ್ಚಿರುವುದು ತಪಾಸಣೆಯಲ್ಲಿ ಕಂಡುಬಂದಿತ್ತು. ಪರೀಕ್ಷೆಯಲ್ಲಿ ಹೆಪಟೊಬ್ಲಾಸ್ಟೋಮಾ ಎಂಬ ಅಪರೂಪದ ಯಕೃತ್ತಿನ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಜೊತೆಗೆ ಅಪರೂಪದ ಸಿಂಪ್ಸನ್-ಗೋಲಾಬಿ-ಬೆಹ್ಮೆಲ್ ಸಿಂಡ್ರೋಮ್ ಕೂಡಾ ಪತ್ತೆಯಾಗಿತ್ತು.
ಯಕೃತ್ತಿನ ಕೇಂದ್ರಭಾಗದಲ್ಲಿದ್ದ ಗೆಡ್ಡೆ ಪ್ರಮುಖ ರಕ್ತನಾಳಗಳಿಂದ ಸುತ್ತುವರಿದಿದ್ದರಿಂದ ಮೊದಲು ಕೀಮೋಥೆರಪಿ ನೀಡಿ ಗೆಡ್ಡೆಯ ಪ್ರಮಾಣವನ್ನು ತಗ್ಗಿಸಲಾಯಿತು. ಬಳಿಕ ಡಾ.ನವೀನ ಕುಮಾರ್ ಎ.ಎನ್. ನೇತೃತ್ವದ ಶಸ್ತ್ರಚಿಕಿತ್ಸಾ ಆಂಕೊಲಾಜಿ ತಂಡ ಸೆಂಟ್ರಲ್ ಹೆಪ್ಟೆಕ್ಟಮಿ ನಡೆಸಿತು.
ಇಂಟ್ರಾಆಪರೇಟಿವ್ ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಯಕೃತ್ತಿನ ಹಾನಿಗೊಳಗಾದ ಭಾಗವನ್ನು ಮಾತ್ರ ತೆಗೆದುಹಾಕಿ ಆರೋಗ್ಯಕರ ಭಾಗಗಳನ್ನು ಉಳಿಸಲಾಯಿತು.
ಮೂರು ವರ್ಷಗಳ ಬಳಿಕವೂ ಮಗುವಿನಲ್ಲಿ ಕ್ಯಾನ್ಸರ್‌ನ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
