ಲೋಕಬಂಧು ನ್ಯೂಸ್ | ಉಡುಪಿ, ಸೆ.12
ಶಿಕ್ಷಕರು ವಿದ್ಯಾರ್ಥಿಗಳನ್ನು ಮಾನವರನ್ನಾಗಿ ರೂಪಿಸುವ ಸಮಾಜದ ಶಿಲ್ಪಿಗಳು. ಶಿಕ್ಷಕ ವೃತ್ತಿ ಎಲ್ಲಕ್ಕಿಂತ ಹೆಚ್ಚು ಪವಿತ್ರವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್. ಲೂವಿಸ್ ಹೇಳಿದರು.
ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಕೆಥೊಲಿಕ್ ಶಿಕ್ಷಣ ಸೊಸೈಟಿ ವತಿಯಿಂದ ಶನಿವಾರ ಆಯೋಜಿಸಿದ್ದ ಧರ್ಮಪ್ರಾಂತ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ಕೇವಲ ಜ್ಞಾನ ಸಂಪಾದನೆಯಲ್ಲ, ಬದಲಾಗಿ ಮಾನವನ ಜೀವನದಲ್ಲಿ ದಯೆ, ಕರುಣೆ ಮತ್ತು ಮಾನವೀಯತೆಯನ್ನು ರೂಪಿಸುವ ಸಾಧನ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕುತೂಹಲ ಎಂಬ ಬೀಜ ಬಿತ್ತಿ ಅದರಿಂದ ಉತ್ತಮ ನಾಗರಿಕ ಎಂಬ ಫಲವನ್ನು ನೀಡುವ ಮಹಾನ್ ಕೆಲಸ ನಿರ್ವಹಿಸುತ್ತಾರೆ. ಶಿಕ್ಷಕರ ದಿನಾಚರಣೆ ಎಂದರೆ ಕೇವಲ ವೃತ್ತಿ ಮಾತ್ರವಲ್ಲ ಅವರ ಧ್ಯೇಯವನ್ನು ನೆನಪಿಸುವುದಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲ ಹಾಗೂ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಅಭಿವೃದ್ಧಿ) ಉಪ ನಿರ್ದೇಶಕ ಡಾ.ಅಶೋಕ್ ಕಾಮತ್, ಶಿಕ್ಷಕರು ಸೇವೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಮೂಡಿಸುತ್ತಾರೆ. ಸವಾಲುಗಳನ್ನು ಸ್ವೀಕರಿಸಿ ಮಕ್ಕಳಲ್ಲಿ ಸಂಸ್ಕಾರ ಕಲ್ಪಿಸುತ್ತಾರೆ.
ಇಂದಿನ ಮಕ್ಕಳು ಮೊಬೈಲ್ ಬಳಕೆಗೆ ದಾಸರಾಗುತ್ತಿದ್ದಾರೆ. ಮಾದಕ ವಸ್ತುಗಳ ಲಭ್ಯತೆ ತರಗತಿ ಕೋಣೆಗೂ ತಲುಪಿರುವುದು ಅಪಾಯಕಾರಿ ಸಂಗತಿ. ಇಂಥ ಸಂಕೀರ್ಣ ಸಮಸ್ಯೆಗಳಿಂದ ವಿದ್ಯಾರ್ಥಿಗಳನ್ನು ಪ್ರೀತಿಯ ಮೂಲಕ ಗೆದ್ದು ಸಮಾಜದ ಉತ್ತಮ ನಾಗರಿಕರನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಕೆಥೊಲಿಕ್ ಎಜುಕೇಶನ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಅತ್ಯಧಿಕ ಫಲಿತಾಂಶ ಪಡೆದ ಶಿಕ್ಷಣ ಸಂಸ್ಥೆಗಳನ್ನು ಗೌರವಿಸಲಾಯಿತು.
ಉಡುಪಿ ಜಿಲ್ಲೆಯ ಮೊದಲ ಮಹಿಳಾ ಕಮರ್ಷಿಯಲ್ ಪೈಲಟ್ ಕ್ಯಾಪ್ಟನ್ ಶೈನಿ ಆಸ್ಮಾ ಸಲ್ಡಾನಾ ಅವರನ್ನು ಗೌರವಿಸಲಾಯಿತು.
ಕೆಥೊಲಿಕ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ವಂ.ವಿನ್ಸೆಂಟ್ ಕ್ರಾಸ್ತಾ ಸ್ವಾಗತಿಸಿ, ಕಲ್ಯಾಣಪುರ ಮಿಲಾಗ್ರಿಸ್ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ವಂದಿಸಿದರು. ಸುರೇಶ್ ಹೆಗ್ಡೆ ಮತ್ತು ಲೊಯ್ಲಿಸ್ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿದರು.
