ಲೋಕಬಂಧು ನ್ಯೂಸ್ | ಉಡುಪಿ
ಯಕ್ಷಗಾನ ಕಲೆಯನ್ನು ರಾಜ್ಯ ಕಲೆಯಾಗಿ ಘೋಷಿಸುವಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದ ಅಕಾಡೆಮಿಯ ನಿಯೋಗ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರನ್ನು ಬೆಂಗಳೂರಿನಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿದ ಸಚಿವ ಶಿವರಾಜ್ ತಂಗಡಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಯಕ್ಷಗಾನ ಇಂದು ಕರ್ನಾಟಕದ ಗಡಿ ಮೀರಿ ಭಾರತೀಯ ಸಾಂಪ್ರದಾಯಿಕ ರಂಗಭೂಮಿಯ ಪ್ರಮುಖ ರೂಪವಾಗಿ ಗುರುತಿಸಿಕೊಂಡಿದೆ. ಭಾರತ ಸರಕಾರದ ಸಂಗೀತ ನಾಟಕ ಅಕಾಡೆಮಿ ತನ್ನ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ ಯಕ್ಷಗಾನವನ್ನು ಕರ್ನಾಟಕದ ಸಾಂಪ್ರದಾಯಿಕ ರಂಗ ರೂಪ ಎಂದು ದಾಖಲಿಸಿದೆ. ಯಕ್ಷಗಾನವನ್ನು ನೃತ್ಯ, ಸಂಗೀತ, ಸಂಭಾಷಣೆ, ವೇಷಭೂಷಣ, ಮೇಕಪ್ ಮತ್ತು ರಂಗತಂತ್ರಗಳನ್ನು ಒಟ್ಟುಗೂಡಿಸುವ ವಿಶಿಷ್ಟ ಕಲಾರೂಪ ಎಂದು ವಿವರಿಸಲಾಗಿದೆ. ಇದು ಯಕ್ಷಗಾನದ ರಾಷ್ಟ್ರೀಯ ಮಹತ್ವಕ್ಕೆ ಬಹಳ ದೊಡ್ಡ ಮಾನ್ಯತೆಯಾಗಿದೆ.
ಈ ಎಲ್ಲಾ ಆಯಾಮಗಳನ್ನು ಪರಾಮರ್ಶಿಸಿದಾಗ ಯಕ್ಷಗಾನ ಕಲೆಯನ್ನು ರಾಜ್ಯ ಕಲೆಯಾಗಿ ಘೋಷಿಸಲು ಎಲ್ಲಾ ರೀತಿಯ ಅರ್ಹತೆ ಪಡೆದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಅನೇಕ ಸಂಘಸಂಸ್ಥೆಗಳು ಯಕ್ಷಗಾನ ಕಲೆ ಹಾಗೂ ಕಲಾವಿದರ ಶ್ರೇಯೋಭಿವೃದ್ಧಿಗೆ ಕಂಕಣಬದ್ಧರಾಗಿ ಸೇವೆ ಸಲ್ಲಿಸುತ್ತಿದ್ದರೂ, ಸರಕಾರದ ಆಶ್ರಯವಿಲ್ಲದೆ ಈ ಕಲೆಯ ಬೆಳವಣಿಗೆ ಉತ್ತುಂಗಕ್ಕೆ ಒಯ್ಯಲು ಸಾಧ್ಯವಾಗದು.
ಈ ನಿಟ್ಟಿನಲ್ಲಿ ಕೇರಳ ರಾಜ್ಯದಲ್ಲಿ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ, ಮಹಾರಾಷ್ಟ್ರದಲ್ಲಿ ಲಾವಣಿ, ಆಂಧ್ರಪ್ರದೇಶದಲ್ಲಿ ಕೂಚಿಪುಡಿ ರಾಜ್ಯ ಕಲೆಯಾಗಿ ಮನ್ನಣೆ ಪಡೆದಿರುವಂತೆಯೇ ಯಕ್ಷಗಾನವನ್ನು ರಾಜ್ಯ ಕಲೆಯಾಗಿ ಘೋಷಿಸಿ ಈ ಕಲೆಯ ಸಮಗ್ರ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
