ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ 2 ಕೋಟಿ ರೂ. ವಂಚನೆ

ಲೋಕಬಂಧು ನ್ಯೂಸ್ | ಮಂಗಳೂರು
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು 75 ವರ್ಷದ ವೃದ್ಧೆಯೊಬ್ಬರಿಗೆ ಸುಮಾರು 2 ಕೋಟಿ ರೂ. ವಂಚಿಸಿರುವ ಘಟನೆ ನಡೆದಿದೆ.
ಪೊಲೀಸ್ ಹಾಗೂ ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ಪರಿಚಯಿಸಿಕೊಂಡ ವಂಚಕರು, ವೃದ್ಧೆಯ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ,  ಬಂಧನದಿಂದ ತಪ್ಪಿಸಿಕೊಳ್ಳಲು ಹಣ ಪಾವತಿಸುವಂತೆ ಸೂಚಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಮಾಡಿದ್ದಾರೆ ಎನ್ನಲಾಗಿದೆ.


ವಂಚಕರ ಮಾತನ್ನು ನಂಬಿದ ವೃದ್ಧೆ ಹಂತ ಹಂತವಾಗಿ ಸುಮಾರು 2 ಕೋಟಿ ರೂ. ಹಣವನ್ನು ವರ್ಗಾಯಿಸಿರುವುದು ತಿಳಿದುಬಂದಿದೆ.


ಬಳಿಕ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಣ ವರ್ಗಾವಣೆಯಾದ ಖಾತೆಗಳು ಹಾಗೂ ವಂಚಕರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.


‘ಡಿಜಿಟಲ್ ಅರೆಸ್ಟ್’ ಎಂಬ ಹೆಸರಿನಲ್ಲಿ ಯಾರನ್ನೂ ಆನ್‌ಲೈನ್ ಮೂಲಕ ಬಂಧಿಸುವ ಕಾನೂನು ವ್ಯವಸ್ಥೆ ಇಲ್ಲ. ಇಂಥ ಕರೆಗಳು ಬಂದಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಹಣ ವರ್ಗಾಯಿಸದೆ, ತಕ್ಷಣ ಪೊಲೀಸರಿಗೆ ಅಥವಾ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.