ಲೋಕಬಂಧು ನ್ಯೂಸ್ | ಉಡುಪಿ
ಗೃಹಜ್ಯೋತಿ ಯೋಜನೆ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನಾ ಪ್ರಕ್ರಿಯೆ ಅವಧಿಯನ್ನು ಅ.31ರ ವರೆಗೆ ವಿಸ್ತರಿಸಲಾಗಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹಜ್ಯೋತಿ ಯೋಜನೆ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನಾ ಪ್ರಕ್ರಿಯೆ ಅವಧಿಯಲ್ಲಿ ಫಲಾನುಭವಿಗಳು ಮನೆಗಳಿಗೆ ಬೀಗ ಹಾಕಿರುವುದು, ಪರಿಶೀಲನಾ ಸಮಯದಲ್ಲಿ ಫಲಾನುಭವಿಗಳು ಲಭ್ಯವಿಲ್ಲದೇ ಇರುವುದು ಮತ್ತಿತರ ಕಾರಣಗಳಿಂದ ಮರುಪರಿಶೀಲನಾ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವುದರಿಂದ ಈ ಪ್ರಕ್ರಿಯೆಯನ್ನು ಅ.31ರ ವರೆಗೆ ವಿಸ್ತರಿಸಲಾಗಿದೆ. ಮೆಸ್ಕಾಂ ಸಿಬ್ಬಂದಿಗಳು ಮೂರು ಬಾರಿ ಮನೆ ಭೇಟಿ ನೀಡಿದಾಗಲೂ ಫಲಾನುಭವಿಗಳು ಲಭ್ಯವಿಲ್ಲದಿದ್ದಲ್ಲಿ ಫಲಾನುಭವಿಗಳು ಸಂಬಂಧಪಟ್ಟ ಮೆಸ್ಕಾಂ ಕಚೇರಿಗೆ ತೆರಳಿ ಮಾಹಿತಿ ನೀಡಬಹುದು ಎಂದರು.
ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆ, ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಿ ಇತ್ಯಾದಿ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾರ್ವಜನಿಕರು ಈ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಗ್ಯಾರಂಟಿ ಯೋಜನೆಗಳು ಈ ಹಿಂದಿನಂತೆಯೇ ಮುಂದುವರಿಯಲಿವೆ ಎಂದ ಅವರು, ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಮೃತಪಟ್ಟ ಪ್ರಕರಣಗಳ ಪರಿಶೀಲನಾ ಕಾರ್ಯ ಮಾತ್ರ ನಡೆಯುತ್ತಿದ್ದು, ಅದಕ್ಕೆ ಕುಟುಂಬಸ್ಥರು ಅಗತ್ಯ ಸಹಕಾರ ನೀಡಬೇಕು ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ನೀಡಲಾಗುತ್ತಿರುವ 2 ಸಾವಿರ ರೂ. ಆರ್ಥಿಕ ಸಹಾಯಧನ ಐದು- ಆರು ತಿಂಗಳಿನಿಂದ ಪಾವತಿಯಾಗುತ್ತಿಲ್ಲ ಎಂದು ಫಲಾನುಭವಿ ಮಹಿಳೆಯರಿಂದ ದೂರುಗಳು ಕೇಳಿ ಬರುತ್ತಿವೆ. ಹಣ ಜಮೆಯಾದ ಬಗ್ಗೆ ಬ್ಯಾಂಕುಗಳಿಂದ ಸಂದೇಶ ಬಾರದ ಹಿನ್ನೆಲೆಯಲ್ಲಿ ಈ ರೀತಿಯ ಗೊಂದಲಗಳು ಉಂಟಾಗುತ್ತಿವೆ. ಫಲಾನುಭವಿಗಳು ಆಗಾಗ ತಮ್ಮ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಪರಿಶೀಲಿಸಿ, ಹಣ ಪಾವತಿ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅರ್ಹ ಫಲಾನುಭವಿಗಳ ಖಾತೆಗೆ ಯೋಜನೆಯ ಹಣ ಜಮೆಯಾಗುವ ಸಂದರ್ಭದಲ್ಲಿ ಮೊಬೈಲ್'ಗಳಿಗೆ ಸಂದೇಶ ರವಾನಿಸುವ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಅನ್ನ ಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಪಡಿತರ ಚೀಟಿದಾರರು ಇ-ಕೆವೈಸಿ ಯನ್ನು ತಪ್ಪದೇ ಮಾಡಿಸಬೇಕು. ಈಗಾಗಲೇ ಉಡುಪಿ ತಾಲೂಕಿನಲ್ಲಿ ಶೇ.81ರಷ್ಟು ಇ-ಕೆವೈಸಿ ಕಾರ್ಯ ಪೂರ್ಣಗೊಂಡಿದ್ದು, ಅ.20ರೊಳಗಾಗಿ ಬಾಕಿ ಉಳಿದಿರುವ ಇ-ಕೆವೈಸಿ ಕಾರ್ಯ ಪೂರ್ಣಗೊಳ್ಳಬೇಕು. ನಾಗರಿಕರು ಅನ್ನಸೇವೆ ಆ್ಯಪ್ ಮೂಲಕವೂ ಸ್ವಯಂ ಆಗಿ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ ಎಂದರು.
ಶಕ್ತಿ ಯೋಜನೆಯಡಿ ಕೊರೋನಾ ನಂತರ ಸ್ಥಗಿತಗೊಂಡಿದ್ದ ಕೆಲವು ರೂಟ್'ಗಳ ಬಸ್ಗಳು ಇಂದಿಗೂ ಸಂಚರಿಸುತ್ತಿಲ್ಲ. ಪ್ರತೀ ಸಭೆಗಳಲ್ಲಿಯೂ ಬಡಗುಬೆಟ್ಟುಗೆ ನಿಗಮದ ಬಸ್ ಸಂಚಾರ ಕಲ್ಪಿಸುವಂತೆ ಸಮಿತಿ ಸದಸ್ಯರು ಒತ್ತಾಯಿಸುತ್ತಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಶೀಘ್ರವಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪದವಿ ಪೂರೈಸಿದ ಯುವಜನರಿಗೆ ಉದ್ಯೋಗ ದೊರಕುವ ವರೆಗೆ ಆರ್ಥಿಕ ಸಹಾಯಧನ ನೀಡಲು ರೂಪಿಸಿರುವ ಯುವನಿಧಿ ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಏರ್ಪಡಿಸಬೇಕು. ಯೋಜನೆಯಡಿ ನೋಂದಣಿ ಕಾರ್ಯಕ್ರಮಗಳು ನಡೆಯುವ ಬಗ್ಗೆ ಯುವಜನರಲ್ಲಿ ಹೆಚ್ಚಿನ ಪ್ರಚಾರ ಮೂಡಿಸಬೇಕು ಎಂದ ಅವರು, ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಈ ಯೋಜನೆ ಬಗ್ಗೆ ಸಮಸ್ಯೆಗಳು ಬಂದಾಗ ಆದಷ್ಟು ತಮ್ಮ ಹಂತದಲ್ಲಿಯೇ ಬಗೆಹರಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಸಾರ್ವಜನಿಕರಲ್ಲಿ ಅವುಗಳ ಬಗ್ಗೆ ಅರಿವು ಮೂಡಿಸಿ, ಅರ್ಹ ಫಲಾನುಭವಿಗಳು ಯೋಜನೆಗಳಿಂದ ಹೊರಗುಳಿಯದಂತೆನೋಡಿಕೊಳ್ಳಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಸೇವಕರಿದ್ದಂತೆ. ಎಷ್ಟೇ ಒತ್ತಡದಲ್ಲಿರೂ ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಫರ್ಜಾನಾ ಎಂ., ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
