ಲೋಕಬಂಧು ನ್ಯೂಸ್ | ಉಡುಪಿ
ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಸರ್ವೇಶ ತಂತ್ರಿ, ವಿಖ್ಯಾತ್ ಭಟ್ ಮತ್ತು ಗಣೇಶ ಸರಳಾಯ ನೇತೃತ್ವದಲ್ಲಿ ಋಷಿ ಮುನಿಗಳಿಂದ ಆರಾಧಿಸಲ್ಪಡುತ್ತಿದ್ದ ಶ್ರೀ ಕುಬೇರ ಚಿತ್ರಲೇಖಾ ಸಹಿತ ಮಹಾಲಕ್ಷ್ಮೀ ಸಾನ್ನಿಧ್ಯದಲ್ಲಿ ಶ್ರೀಲಕ್ಷ್ಮೀ ಸಹಸ್ರನಾಮ ಪಾಯಸ ಹೋಮ ನೆರವೇರಿತು.
ಜೋಡಿ ಚಂಡಿಕಾಯಾಗ, ದುರ್ಗಾ ನಮಸ್ಕಾರ ಸೇವೆ ನಡೆಸಲಾಯಿತು. ಸಹಸ್ರ ನಾಮಾರ್ಚನೆ, ಕಲೋಕ್ತ ಪೂಜೆ, ರಂಗಪೂಜೆ, ದೀಪಾರಾಧನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮಧ್ಯಾಹ್ನ ಮಹಾಪೂಜೆ ಬಳಿಕ ಮತ್ತು ಸಂಜೆ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಯುವ ಕಲಾವಿದರು ನೃತ್ಯ ಸೇವೆ ಸಮರ್ಪಿಸಿದರು. ನವಶಕ್ತಿ ವೇದಿಕೆಯಲ್ಲಿ ನಾಟ್ಯ ವೈಭವ, ತುಳು ನಾಟಕ ಪ್ರದರ್ಶನಗೊಂಡಿತು.
ಕ್ಷೇತ್ರದ ಆನಂದ ಬಾಯರಿ ಅಲಂಕಾರದಲ್ಲಿ ಸಹಕರಿಸಿದರು. ಪ್ರಧಾನ ಅರ್ಚಕ ಅನೀಶ್ ಆಚಾರ್ಯ ಮಹಾಪೂಜೆ ನೆರವೇರಿಸಿದರು.
ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಅನೇಕ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ನೃತ್ಯಾರ್ಥಿಗಳು, ಕಲಾವಿದರು ನೃತ್ಯಸೇವೆ, ಗಾನ ಸೇವೆ ಸಮರ್ಪಿಸಿದರು.
