ಚಿತ್ರಕಲಾ ಸ್ಪರ್ಧೆ ಮಕ್ಕಳ ಸುಪ್ತ ಸೃಜನಶೀಲತೆ ಅನಾವರಣಕ್ಕೆ ವೇದಿಕೆಯಾಗಲಿ

ಲೋಕಬಂಧು ನ್ಯೂಸ್ | ಪಡುಬಿದ್ರಿ
ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಶನಿವಾರ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಬ್ಯಾಂಕಿನ ಅಧ್ಯಕ್ಷ‌ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಶಪಾಲ್ ಸುವರ್ಣ ಅವರು ಉಚ್ಚಿಲ ಮಹಾಲಕ್ಷ್ಮೀ ತಾಯಿ ಸನ್ನಿಧಿಯಲ್ಲಿ ನಡೆಯುವ ಈ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಸುಪ್ತ ಸೃಜನಶೀಲತೆ ಅನಾವರಣಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಿ ಚಿತ್ರಕಲೆ ಮೂಲಕ ಎಳವೆಯಿಂದಲೇ ಧಾರ್ಮಿಕ ಪ್ರಜ್ಞೆ ಮೂಡುವಂತಾಗಲಿ ಎಂದು‌ ಆಶಿಸಿದರು.
ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಯಶಪಾಲ್ ಸುವರ್ಣ ಅಧ್ಯಕ್ಷತೆಯ ಮಹಾಲಕ್ಷ್ಮೀ ಬ್ಯಾಂಕ್ ಮತ್ತು ದಕ್ಷಿಣ ಕನ್ನಡ ಮೀನು ಮಾರಾಟ ಫೆಡರೇಶನ್ ಸಂಸ್ಥೆ ಮೂಲಕ ಉಚ್ಚಿಲ ದಸರಾ ಮಹೋತ್ಸವಕ್ಕೆ ವಿಶೇಷ ಸಹಕಾರ ನೀಡುವ ಜೊತೆಗೆ ಚಿತ್ರಕಲೆ, ಕಿನ್ನಿ ಪಿಲಿ ಹಾಗೂ  ಪೊಣ್ಣು ಪಿಲಿ ನಲಿಕೆ ಸ್ಪರ್ಧೆಗಳ ಆಯೋಜನೆ ಮೂಲಕ ದಸರಾ ಮಹೋತ್ಸವಕ್ಕೆ ಹೊಸ ಮೆರಗು ನೀಡಿದೆ ಎಂದರು.


ಸಮಾರಂಭದಲ್ಲಿ ಮಲ್ಪೆ ಮೀನುಗಾರರ ಸಂಘದ ನಿಕಟಪೂರ್ವ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಮಲ್ಪೆ ಯಾಂತ್ರಿಕ ಟ್ರಾಲ್ ದೋಣಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಉಚ್ಚಿಲ ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಬ್ಯಾಂಕಿನ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್,  ನಿರ್ದೇಶಕರಾದ ಶಶಿಕಾಂತ್ ಪಡುಬಿದ್ರೆ, ಶೋಭೇಂದ್ರ ಸಾಲ್ಯಾನ್ ಮತ್ತು ವನಜ ಪುತ್ರನ್, ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ,  ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶಾರಿಕಾ ಕಿರಣ್, ಆನಂದ  ಸೆಲ್ವಂ ಉಪಸ್ಥಿತರಿದ್ದರು.

ಬ್ಯಾಂಕಿನ ಸಿಬ್ಬಂದಿ ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.