ಉಡುಪಿ ಉಚ್ಚಿಲ ದಸರಾ: ಸ್ಕಂದಮಾತಾ ಆರಾಧನೆ

ಲೋಕಬಂಧು ನ್ಯೂಸ್ | ಪಡುಬಿದ್ರಿ
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ನಡೆಯುತ್ತಿರುವ ಪಂಚಮ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಐದನೇ ದಿನವಾದ ಗುರುವಾರ ಶ್ರೀ ಸ್ಕಂದಮಾತಾದೇವಿ ಆರಾಧನೆ ಮಾಡಲಾಯಿತು.
ಶ್ರೀಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಶ್ರೀ ಶಾರದಾಮಾತೆ ಮತ್ತು ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಸಲಾಯಿತು.
ಕಾರ್ಕಳ ಮಹಾಲಕ್ಷ್ಮೀ ಶೆಣೈ ಅವರಿಂದ ಹಿಂದೂಸ್ಥಾನಿ ಸಂಗೀತ, ಮೊಗವೀರ ಭವನದಲ್ಲಿ ರಂಗೋಲಿ ಸ್ಪರ್ಧೆ, ಭಜನಾ ಸಂಕೀರ್ತನೆ, ಸುಮಂಗಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸಲಾಯಿತು.


ಸಂಜೆ ನವದುರ್ಗೆಯರಿಗೆ ಮಹಾಪೂಜೆ ನಡೆದು ಶ್ರೀ ಅಂಬಿಕಾ ಕಲ್ಪೋಕ್ತಪೂಜೆ ನಡೆಸಲಾಯಿತು. ಧಾರ್ಮಿಕ ಪ್ರವಚನ, ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ದ್ವಿತಿ ಶೆಟ್ಟಿ ಮತ್ತು ಶ್ರಾವಣಿ ಭಟ್ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಏರ್ಪಾಡಾಗಿತ್ತು.
ಈ ಸಂದರ್ಭದಲ್ಲಿ ಉಡುಪಿ ಉಚ್ಚಿಲ ದಸರಾ ರೂವಾರಿ ನಾಡೋಜ ಡಾ.ಜಿ.ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ- ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮೋಹನ್ ಬೇಂಗ್ರೆ, ದಿನೇಶ್ ಎರ್ಮಾಳ್, ಮನೋಜ್ ಕಾಂಚನ್, ಸತೀಶ್ ಕುಂದರ್ ಮಲ್ಪೆ, ವಾಸುದೇವ ಸಾಲ್ಯಾನ್, ಗುಂಡು ಬಿ. ಅಮೀನ್, ರತ್ನಾಕರ ಸಾಲ್ಯಾನ್ ಮಲ್ಪೆ, ವಿಶ್ವಾಸ್ ಅಮೀನ್, ಸಂಧ್ಯಾದೀಪ ಸುನಿಲ್, ಕವಿತಾ ಶರತ್, ದೇವಳದ ಪ್ರಬಂಧಕ ಸತೀಶ ಅಮೀನ್ ಪಡುಕೆರೆ ಮೊದಲಾದವರಿದ್ದರು.