ಲೋಕಬಂಧು ನ್ಯೂಸ್ | ಉಡುಪಿ
ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರುಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅ.21ರ ವರೆಗೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯುವ ಶರನ್ನವರಾತ್ರಿ ಮಹೋತ್ಸವ ಭಾನುವಾರ ಕದಿರು ಕಟ್ಟುವ ಮೂಲಕ ಆರಂಭಗೊಂಡಿತು.
ಕ್ಷೇತ್ರದ ಅರ್ಚಕರಾದ ಸರ್ವೇಶ ತಂತ್ರಿ ಮತ್ತು ಅನೀಶ್ ಆಚಾರ್ಯ ಸಹಯೋಗದೊಂದಿಗೆ ಬೆಳಿಗ್ಗೆ ಧಾನ್ಯಲಕ್ಷ್ಮೀಪೂಜೆ (ತೆನೆ ಪೂಜೆ) ನಡೆಸಲಾಯಿತು.
ಬಳಿಕ ಜೋಡಿ ಚಂಡಿಕಾ ಯಾಗ, ಸಹಸ್ರನಾಮಾರ್ಚನೆ, ಕಲ್ಪೋಕ್ತಪೂಜೆ, ರಾತ್ರಿ ರಂಗಪೂಜೆ, ಭಜನೆ, ನೃತ್ಯ ಸೇವೆ ದೀಪಾರಾಧನೆಯೊಂದಿಗೆ ನಡೆಯಿತು.
ಅನೇಕ ಮಂದಿ ಭಕ್ತಾದಿಗಳು ಅನ್ನಪ್ರಸಾದ ಭೋಜನ ಸ್ವೀಕರಿಸಿದರು.
ಲಲಿತಾ ಸಹಸ್ರನಾಮ, ಲಕ್ಷ್ಮೀ ಶೋಭಾನೆ ಪಠಣ ಇತ್ಯಾದಿ ನಡೆಯಿತು. ಮಕ್ಕಳಿಗೆ ಅಕ್ಷರಾಭ್ಯಾಸವೂ ನಡೆಯಿತು ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ಆಚಾರ್ಯ ತಿಳಿಸಿದ್ದಾರೆ.
