ಬಡವರು, ಅಸಹಾಯಕರ ಕಲ್ಯಾಣಕ್ಕೆ ಹೊಸ ಹೆಜ್ಜೆ- ಉಡುಪಿ ಧರ್ಮಪ್ರಾಂತ್ಯ ಮತ್ತು ಎಂಡಿಎಸ್ ಚಾರೀಟಿಸ್ ನಡುವೆ ಒಪ್ಪಂದ

ಲೋಕಬಂಧು ನ್ಯೂಸ್ ಉಡುಪಿ
ಮೈಕಲ್ ಡಿ'ಸೋಜಾ (ಎಂಡಿಎಸ್) ಚಾರಿಟೀಸ್ ಮತ್ತು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ನಡುವೆ ಬಡವರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮುಂದಿನ ಐದು ವರ್ಷಗಳಿಗಾಗಿ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ಗುರುವಾರ ಉಡುಪಿ ಬಿಷಪ್ ಹೌಸ್‌ನಲ್ಲಿ ನಡೆಯಿತು.ಉಡುಪಿ‌ ಬಿಷಪ್ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಹಾಗೂ ಎಂಡಿಎಸ್ ಚಾರಿಟೀಸ್ ಮುಖ್ಯಸ್ಥ ಮೈಕೆಲ್ ಡಿ'ಸೋಜಾ ಅವರು ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.


ಬಳಿಕ ಮಾತನಾಡಿದ ಬಿಷಪ್ ವಂ.ಡಾ.ಲೆಸ್ಲಿ ಡಿ'ಸೋಜಾ, ಬಡವರು ಮತ್ತು ಅಶಕ್ತರ ಕಣ್ಣೀರೊರೆಸುವ ಕಾಯಕದಲ್ಲಿ ಉಡುಪಿ ಧರ್ಮಪ್ರಾಂತ್ಯ ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ತನ್ನ ಸೇವೆಯನ್ನು ನೀಡುತ್ತಾ ಬಂದಿದೆ. ಈ ಕಾಯಕಕ್ಕೆ ಉದ್ಯಮಿ ಕೊಡುಗೈ ದಾನಿಗಳಾದ ಮೈಕೆಲ್ ಡಿ'ಸೋಜಾ ಅವರು ಧರ್ಮಪ್ರಾಂತ್ಯದೊಂದಿಗೆ ಕೈಜೋಡಿಸಿರುವುದು ಮತ್ತಷ್ಟು ಸೇವೆ ನೀಡಲು ಪೂರಕವಾಗಲಿದೆ.


ಕಳೆದ 15 ವರ್ಷಗಳಲ್ಲಿ ಶಿಕ್ಷಣ, ಬಡವರಿಗೆ ಮನೆ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳಿಗೆ ಎಂಡಿಎಸ್ ಚಾರಿಟೀಸ್ ಮೂಲಕ ಸುಮಾರು 13 ಕೋ ರೂ.ಗಳಿಗೂ ಅಧಿಕ ಮೊತ್ತ ವ್ಯಯಿಸಲಾಗಿದೆ.


ಸಮುದಾಯದ ಹಿಂದುಳಿದ ಮಕ್ಕಳನ್ನು ಪ್ರೋತ್ಸಾಹಿಸುವುದರೊಂದಿಗೆ ಅವರಿಗೆ ಜೀವನದಲ್ಲಿ ಯಶಸ್ಸು ಕಾಣಲು ಸಹಕಾರ  ನೀಡಿದಂತಾಗುತ್ತದೆ. ಅದರೊಂದಿಗೆ ಬಡ ಕುಟುಂಬಗಳ ನೋವಿನಲ್ಲಿ ಸಹಾಯ ಹಸ್ತ ಚಾಚುವ ಕೆಲಸ ಇನ್ನಷ್ಟು ಯಶಸ್ವಿಯಾಗಿ ಮುಂದುವರಿಯಲಿದೆ ಎಂದರು.


ಎಂಡಿಎಸ್ ಚಾರಿಟೀಸ್ ಮುಖ್ಯಸ್ಥ ಮೈಕೆಲ್ ಡಿ'ಸೋಜಾ ಮಾತನಾಡಿ ಹೆತ್ತ ತಾಯಿ, ಹುಟ್ಟಿದ ಊರು ಮತ್ತು ಮಾತೃಭಾಷೆಯನ್ನು ನಾವು ಎಂದಿಗೂ ಮರೆಯಬಾರದು. ಈ ನಿಟ್ಟಿನಲ್ಲಿ ತಮ್ಮ ಟ್ರಸ್ಟಿನ ಮೂಲಕ ಸಮುದಾಯದ ಅಶಕ್ತರನ್ನು ಮೇಲೆತ್ತುವ ಕಾಯಕ ಮಾಡಿಕೊಂಡು ಬಂದಿರುವುದು ಸಮಾಧಾನ ಮತ್ತು ನೆಮ್ಮದಿಯನ್ನು ನೀಡಿದೆ.


ಸಮುದಾಯದ ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಏರಬೇಕು. ಆ ಮೂಲಕ ಹೆಚ್ಚಿನ ಸಾಧನೆ ಮಾಡಲು ಮುಂದೆಯೂ ಧರ್ಮಪ್ರಾಂತ್ಯದೊಂದಿಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ಹೇಳಿದರು.


ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಕಳೆದ 15 ವರ್ಷಗಳಲ್ಲಿ ಎಂಡಿ ಎಸ್ ಚಾರಿಟೀಸ್ ಮೂಲಕ ಧರ್ಮಪ್ರಾಂತ್ಯದ ಎಡ್ಯುಕೇರ್ ಶೈಕ್ಷಣಿಕ ಸಹಾಯ, ಮನೆ ನಿರ್ಮಾಣಕ್ಕೆ ಅನುದಾನ, ಮೂರನೇ ಮಗುವಿಗೆ ವಿದ್ಯಾರ್ಥಿ ವೇತನ ಸೇರಿದಂತೆ  ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಲಭಿಸಿದ ಅನುದಾನದ ಮಾಹಿತಿ ನೀಡಿದರು.

ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ವಂ. ಫ್ರಾನ್ಸಿಸ್ ಎಫ್.ಲೂವಿಸ್, ಕುಲಪತಿ ವಂ.ಸ್ಟೀವನ್ ಡಿ'ಸೋಜಾ, ಜುಡಿಶೀಯಲ್ ವಿಕಾರ್ ವಂ.ಡಾ.ರೋಶನ್ ಡಿ'ಸೋಜಾ, ಸಂಪದ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ, ಸೆನೆಟ್ ಸಭೆಯ ಸಹಕಾರ್ಯದರ್ಶಿ ವಂ. ವಿಲ್ಸನ್ ಡಿ'ಸೋಜಾ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್ ಎಂಡಿಎಸ್ ಚಾರಿಟೀಸ್'ನ ಫ್ಲೇವಿ ಡಿಸೋಜಾ, ಲೈನಲ್ ಆರಾನ್ಹಾ, ಓಸ್ವಲ್ಡ್ ರೊಡ್ರಿಗಸ್ ಮತ್ತು ಶುಭಾ ರೊಡ್ರಿಗಸ್ ಉಪಸ್ಥಿತರಿದ್ದರು.