ಆರೋಗ್ಯ ಸಚಿವರ ಬೇಜವಾಬ್ದಾರಿ ಹೇಳಿಕೆ ಮೂಲಕ ಕಾಂಗ್ರೆಸ್ ಸರ್ಕಾರದ ಮನಃಸ್ಥಿತಿ ಬಯಲು

ಲೋಕಬಂಧು ನ್ಯೂಸ್ ಉಡುಪಿ
ಕಳೆದ ಹತ್ತು ದಿನಗಳಿಂದ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸಿದರೂ ಸ್ಪಂದಿಸದ ರಾಜ್ಯ ಸರ್ಕಾರ, ಇದೀಗ ಆಶಾ ಕಾರ್ಯಕರ್ತೆಯರ ಸೇವೆಯನ್ನೇ ಅವಮಾನಿಸುವ ರೀತಿಯಲ್ಲಿ ರಾಜ್ಯದ ಆರೋಗ್ಯ ಸಚಿವ ಯು. ಟಿ‌ ಖಾದರ್ ಅವರು 'ಆಶಾ ಕಾರ್ಯಕರ್ತೆಯರು ಇದ್ದರೂ ಇಲ್ಲದಿದ್ದರೂ ನಡೆಯುತ್ತೆ' ಎಂಬ ಬೇಜವಾಬ್ದಾರಿ ಹೇಳಿಕೆ ಆಶಾ ಕಾರ್ಯಕರ್ತೆಯರ ಬಗ್ಗೆ ರಾಜ್ಯ ಸರ್ಕಾರದ ಮನಃಸ್ಥಿತಿಯನ್ನು ಬಯಲು ಮಾಡಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಮನೆ ಮನೆಗಳಿಗೆ ತೆರಳಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಆರೋಗ್ಯ ಸಚಿವರೇ ಅವಮಾನಿಸುತ್ತಿರುವುದು ಖಂಡನೀಯ.


ಅಧಿಕಾರಕ್ಕೆ ಬರುವ ಮುನ್ನ ಇದೇ ಆಶಾ ಕಾರ್ಯಕರ್ತೆಯರಿಗೆ ವೇತನ ಏರಿಕೆ ಮಾಡುವ ಆಶ್ವಾಸನೆ ನೀಡುವಾಗ   ಆಶಾ ಕಾರ್ಯಕರ್ತೆಯರ ಬಗ್ಗೆ ಇದ್ದ ಕಾಳಜಿ ಕಾಂಗ್ರೆಸ್ ಪಕ್ಷಕ್ಕೆ ಇದೀಗ 3 ವರ್ಷದಲ್ಲಿ ಈಗ ಮಾಯವಾಯಿತೇ ಎಂದು ಪ್ರಶ್ನಿಸಿರುವ ಶಾಸಕ ಯಶಪಾಲ್, 'ವಿನಾಶ ಕಾಲಕ್ಕೆ ವಿಪರೀತ ಬುದ್ಧಿ' ಎಂಬಂತೆ ಸಚಿವ ಖಾದರ್ ಅತಿರೇಕದ ಹೇಳಿಕೆ ನೀಡಿದ್ದು, ಇತ್ತೀಚೆಗೆ ಮಂಡ್ಯದಲ್ಲಿ ಸಚಿವ ನರೇಂದ್ರ ಸ್ವಾಮಿ 'ಕೇಳಿದಾಗಲೆಲ್ಲ ಕಂಠಿ ಹಾರ ನೀಡಲು ಸಾಧ್ಯವಿಲ್ಲ' ಎಂದು ಹೇಳುವ ಮೂಲಕ ಆಶಾ ಕಾರ್ಯಕರ್ತೆಯರಿಗೆ ಅಪಮಾನ ಮಾಡಿದ್ದಾರೆ.


ಕಾಂಗ್ರೆಸ್ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಬಿಸಿ ತಟ್ಟಿದ್ದು, ಇದೀಗ ರಾಜ್ಯದ ಸಚಿವರೇ ಹತಾಶರಾಗಿ ಹೇಳಿಕೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಬೇಜವಾಬ್ದಾರಿ ಹೇಳಿಕೆ ನೀಡಿದ ಸಚಿವ ಖಾದರ್ ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ.