ಕಾಂಗ್ರೆಸ್‌ನಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್'ಗೆ ನಿರಂತರ ಅಗೌರವ

ಲೋಕಬಂಧು ನ್ಯೂಸ್ | ಉಡುಪಿ
ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಅಸಮಾನತೆ, ಅಸ್ಪೃಶ್ಯತೆಯ ಅವಮಾನ ಎದುರಿಸಿಯೂ ಉನ್ನತ ಶಿಕ್ಷಣ ಪಡೆದ ಡಾ.ಬಿ.ಆರ್. ಅಂಬೇಡ್ಕರ್ ಬದುಕಿದ್ದಾಗ ಮಾತ್ರವಲ್ಲದೆ ಸಾವಿನಲ್ಲೂ ಕಾಂಗ್ರೆಸ್ ರಾಜಕಾರಣದ ಅಗೌರವ ತೋರಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಡಿ.ಬಿ. ಅವರು ಆರೋಪಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸಂವಿಧಾನ ಗೌರವ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಮೀಸಲಾಗಿಲ್ಲ. ಸಂವಿಧಾನವನ್ನು ನಾವು ಬದುಕಿನಲ್ಲಿ ಎಷ್ಟು ಅಳವಡಿಸಿಕೊಂಡಿದ್ದೇವೆ, ನಮ್ಮ ಅನುಕೂಲಕ್ಕಾಗಿ ಎಷ್ಟು ಸಲ ಬದಲಾಯಿಸಿದ್ದೇವೆ ಎಂದವರು ಪ್ರಶ್ನಿಸಿದರು.


ಶಾಲೆಗೆ ಸೇರುವಾಗಲೇ ಜಾತಿ ವ್ಯವಸ್ಥೆಯ ಕರಾಳ ಮುಖ ಕಂಡ ಅಂಬೇಡ್ಕರ್ ಶಿಕ್ಷಣದ ಅಗತ್ಯ ಮತ್ತು ಪ್ರಾಮುಖ್ಯತೆಯನ್ನು ದಲಿತರಿಗಷ್ಟೇ ಅಲ್ಲ ನಾಡಿನ ಸಮಸ್ತ ಜನತೆಗೆ ತೋರಿಸಿದ್ದಾರೆ. ಅಂತ್ಯೋದಯ, 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಯೋಜನೆ ಮೂಲಕ ಅಂಬೇಡ್ಕರ್ ಕನಸನ್ನು ಬಿಜೆಪಿ ನನಸಾಗಿಸುತ್ತಿದೆ.


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ಜಮ್ಮು ಕಾಶ್ಮೀರದ 370ನೇ ವಿಧಿ ರದ್ಧತಿ ಮೂಲಕ ಅಖಂಡತೆಯ ಅಂಬೇಡ್ಕರ್ ಕನಸು ವಿಸ್ತರಣೆಯಾಗಿದೆ. ಅಂಬೇಡ್ಕರ್ ಕಂಡ 'ಏಕ ರೂಪ ನಾಗರಿಕ ಸಂಹಿತೆ'ಯ ಕನಸು ನನಸಾಗಬೇಕಿದೆ.


ಕಾಂಗ್ರೆಸ್ ಮತ ಪತ್ರ ಮೂಲಕ ಅಂಬೇಡ್ಕರ್ ಸೋಲಿಗೆ ಕಾರಣವಾಯಿತು. ತುಷ್ಟೀಕರಣ ನೀತಿಯ ಮೂಲಕ ಅವರನ್ನು ಅವಕಾಶ ವಂಚಿತರನ್ನಾಗುವಂತೆ ಮಾಡಿತು. ಮೀಸಲಾತಿ, ದಲಿತ ವಿರೋಧಿ ನೀತಿಯನ್ನು ಕಾಂಗ್ರೆಸ್ ಸದಾ ಅನುಸರಿಸುತ್ತಾ ಬಂದಿದೆ. ಒಟ್ಟು 106 ಬಾರಿ ಸಂವಿಧಾನ ತಿದ್ದುಪಡಿ ಆಗಿದ್ದು, ಕಾಂಗ್ರೆಸ್ ಪಕ್ಷ ತನ್ನ ಸ್ವಾರ್ಥಕ್ಕಾಗಿ 75 ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ರಾಜ್ಯ ಕಾಂಗ್ರೆಸ್ ಸರಕಾರ 52 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿ ದಲಿತರ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಗಾಲು ಹಾಕಿದೆ ಎಂದು ಕೃಷ್ಣಮೂರ್ತಿ ಹೇಳಿದರು.


ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯಕ್ ಅಲೆವೂರು ಮಾತನಾಡಿ, ಡಿ.1ರಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ್ ದ್ವಿವೇದಿ ನೇತೃತ್ವದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಉಡುಪಿಯಲ್ಲಿ ಮಂಗಳೂರು ವಿಭಾಗ ಮಟ್ಟದ ಸಂಘಟನಾತ್ಮಕ ಸಭೆ ನಡೆಯಲಿದೆ. ಡಿ.1ರಿಂದ ಡಿ.25ರ ವರೆಗೆ 'ಸೇವಾ ಧೂತ' ಅಭಿಯಾನ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಮತ್ತು ಬೆಲೆ ಏರಿಕೆಯನ್ನು ಖಂಡಿಸಿ ಮಂಡಲವಾರು ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಯಲಿದೆ ಎಂದರು.


ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಅಧ್ಯಕ್ಷತೆ ವಹಿಸಿದ್ದರು.


ಸಂವಿಧಾನ ಗೌರವ ದಿವಸ ಆಚರಣೆ ಜಿಲ್ಲಾ ಸಮಿತಿ ಸದಸ್ಯ ರತ್ನಾಕರ ಇಂದ್ರಾಳಿ ರಸಪ್ರಶ್ನೆ ನಡೆಸಿಕೊಟ್ಟರು. ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮೊದಲಾದವರಿದ್ದರು.


ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಜಲಾ ಸತೀಶ್ ವಂದೇ ಮಾತರಂ ಹಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಉಮೇಶ್ ನಾಯ್ಕ್ ಚೇರ್ಕಾಡಿ ನಿರೂಪಿಸಿ, ವಂದಿಸಿದರು.