ಲೋಕಬಂಧು ನ್ಯೂಸ್ ಕುಂದಾಪುರ
ಕೋಟೇಶ್ವರ ಕೊಡಿಹಬ್ಬ ಸಂದರ್ಭದಲ್ಲಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ತೆರಳಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.ನ.24ರಂದು ಗೀತಾ ಎಂಬವರು ಪತಿಯೊಂದಿಗೆ ಔಷಧ ತರಲೆಂದು ಕುಂದಾಪುರಕ್ಕೆ ತೆರಳಿದ್ದು, ಕೋಟೇಶ್ವರದಲ್ಲಿ ಕೊಡಿಹಬ್ಬ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೋಟೇಶ್ವರ ಬೈಪಾಸ್ನಲ್ಲಿ ಬಸ್ನಿಂದ ಇಳಿದು ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಬೆಳಿಗ್ಗೆ 11.30ರ ಸುಮಾರಿಗೆ ದೇವರ ದರ್ಶನ ಪಡೆದಿದ್ದರು.
ಬಳಿಕ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ, ಮಧ್ಯಾಹ್ನ 12.30ರ ಸುಮಾರಿಗೆ ದೇವಸ್ಥಾನದ ಪೌಳಿಯ ಹೊರಭಾಗದಲ್ಲಿ ಅನ್ನಪ್ರಸಾದ ಸ್ವೀಕರಿಸಲು ಜನಜಂಗುಳಿಯ ಸರತಿ ಸಾಲಿನಲ್ಲಿ ನಿಂತಿದ್ದರು.
ಆ ವೇಳೆ ಅಪರಿಚಿತರು ಅವರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದರು. ಕಳವಾದ ಸರದ ಮೌಲ್ಯ ಸುಮಾರು 6 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಆ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೊಡಗು ಜಿಲ್ಲೆಯ ಕುಶಾಲನಗರದ ಭಾಗ್ಯ (39), ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅಶ್ವಿನಿ ಎಲ್. ಅಲಿಯಾಸ್ ಗಾಯತ್ರಿ (25), ಕಾಮಾಚಿ (50), ಕೃಷ್ಣಗಿರಿ ಜಿಲ್ಲೆಯ ಆದಮ್ಮಾಳ್ ಅಲಿಯಾಸ್ ಆದ್ಯಾಮ್ಮ (49) ಹಾಗೂ ಕುಶಾಲನಗರದ ಎಸ್. ನಾಗರಾಜ (48) ಎಂಬವರನ್ನು ಬಂಧಿಸಿ ಆರೋಪಿಗಳಿಂದ ಕಳವು ಮಾಡಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ್ದ ಕೆಎ 01 ಎಂಆರ್ 7991 ನೋಂದಣಿ ಸಂಖ್ಯೆಯ ಸಿಲ್ವರ್ ಬಣ್ಣದ ಮಹೀಂದ್ರಾ ಟಿಯುವಿ 300 ಕಾರು ಹಾಗೂ ಏಳು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ನಿರೀಕ್ಷಕ ಜಯರಾಮ್ ಡಿ. ಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪಿಎಸ್ಐಗಳಾದ ನಂಜಾನಾಯ್ಕ್ ಎನ್. ಮತ್ತು ಪುಷ್ಪ, ಸಿಬ್ಬಂದಿಗಳಾದ ಮೋಹನ, ಸಂತೋಷ್ ಕುಮಾರ್, ಮಹಾಬಲ ಶೆಟ್ಟಿಗಾರ, ಚಂದ್ರಶೇಖರ ಅರೆಶಿರೂರು, ಘನಶ್ಯಾಮ್, ಸಂತೋಷ ದೇವಾಡಿಗ, ಗೌತಮ, ಲೋಹಿತ್, ನಾರಾಯಣ, ಪದ್ಮಾವತಿ, ರೇವತಿ, ಭಾಗೀರಥಿ, ಎಆರ್ಎಸ್ಐ ರಾಜು ಭೋವಿ, ಖಾಸಿಮ್ ಜಮಾದಾರ್ ಹಾಗೂ ಆರ್ಡಿಸಿ ವಿಭಾಗದ ದಿನೇಶ್ ಮತ್ತು ನಿತೀನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.