ಎಚ್ಐವಿ ಏಡ್ಸ್ ನಿಯಂತ್ರಣ: ಉಡುಪಿ ಜಿಲ್ಲೆಗೆ ರಾಷ್ಟ್ರ ಮಟ್ಟದ ಮಾನ್ಯತೆ

ಲೋಕಬಂಧು ನ್ಯೂಸ್ | ಉಡುಪಿ
ಎಚ್ಐವಿ ಏಡ್ಸ್ ನಿಯಂತ್ರಣ ಮತ್ತು ಜಾಗೃತಿ ಕಾರ್ಯದಲ್ಲಿ ಮಹತ್ವದ ಸಾಧನೆ ಮಾಡಿರುವ ಉಡುಪಿ ಜಿಲ್ಲೆಗೆ ರಾಷ್ಟ್ರ ಮಟ್ಟದ ಮನ್ನಣೆ ದೊರೆತಿದೆ. ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್ಎಸಿಓ) ವತಿಯಿಂದ ದೇಶದಾದ್ಯಂತ ಹಮ್ಮಿಕೊಳ್ಳಲಾಗಿರುವ ಮೊಬಿಲೈಸೇಷನ್ ಫಾರ್ ಏಡ್ಸ್ ಸುರಕ್ಷಾ ಉಪಕ್ರಮದಡಿ ನಿಗದಿಪಡಿಸಿರುವ 95-95-95 ಗುರಿ ಸಾಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಸುರಕ್ಷಿತ್ ಸನ್ಮಾನ ಲಭಿಸಿದೆ ಎಂದರು.
ಈ ಸಾಧನೆಗಾಗಿ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಯತ್ನಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ರಿತು ಶರ್ಮಾ ಶ್ಲಾಘಿಸಿದ್ದಾರೆ.


ನ.18ರಂದುಹೊರಡಿಸಿರುವ ಅಧಿಕೃತ ಪತ್ರದಲ್ಲಿ ಜಿಲ್ಲೆಯ ಈ ಮಹತ್ವದ ಸಾಧನೆಯನ್ನು ಅಭಿನಂದಿಸಿ, ಅಧಿಕಾರಿಗಳ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಡಿ.1ರಂದು ನವದೆಹಲಿಯಲ್ಲಿ ನಡೆಯಲಿರುವ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗೆ ಆಹ್ವಾನ ನೀಡಲಾಗಿದ್ದು, ನವದೆಹಲಿಯ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯಲಿರುವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಧನೆಯನ್ನು ಗೌರವಿಸಲಾಗುವುದು.