ಲೋಕಬಂಧು ನ್ಯೂಸ್ ಉಡುಪಿ
ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಬಡವರು, ಮಹಿಳೆಯರು ಮತ್ತು ದಲಿತರಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. ಆ ಅಸಮಾನತೆಯನ್ನು ಅರಿತ ಪ್ರಧಾನಿ ಜವಾಹರಲಾಲ್ ನೆಹರೂ 1950ರಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದರು. ಇಂದು ಜಾತಿ, ಧರ್ಮ, ಲಿಂಗ ಮತ್ತು ಆರ್ಥಿಕ ಭೇದವಿಲ್ಲದೆ ಶೇ.75ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಅವರ ದೂರದೃಷ್ಟಿಯ ಫಲ ಎಂದು ಡಾ.ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.ಉದ್ಯಾವರ ಫ್ರೆಂಡ್ಸ್ ಸರ್ಕಲ್ ವತಿಯಿಂದ ನೆಹರೂ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಉದ್ಯಾವರದ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ನೆಹರೂ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳೇ ದೇಶದ ಭವಿಷ್ಯ ಎಂದು ನಂಬಿದ್ದ ನೆಹರೂ, ಅವರ ಅಭಿವೃದ್ಧಿಗೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಸ್ವಾತಂತ್ರ್ಯದ ಬಳಿಕ ಬಡತನ, ಅನಕ್ಷರತೆ ಮತ್ತು ನಿರುದ್ಯೋಗದಿಂದ ಬಳಲುತ್ತಿದ್ದ ದೇಶದ ಅಭಿವೃದ್ಧಿಗೆ ಅವರು ಭದ್ರ ಬುನಾದಿ ಹಾಕಿದರು. ಸಂವಿಧಾನ ರಚನೆಗೆ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ನೇತೃತ್ವ ವಹಿಸಿದ್ದು ಮಹತ್ವದ ನಿರ್ಧಾರವಾಗಿತ್ತು ಎಂದರು.
ಸಾಮಾಜಿಕ ಮಾಧ್ಯಮದ ಹೇಳಿಕೆಗಳ ಆಧಾರದಲ್ಲಿ ನಾಯಕರ ವ್ಯಕ್ತಿತ್ವ ನಿರ್ಧರಿಸದೆ, ಅವರ ಬದುಕು ಮತ್ತು ಕೆಲಸಗಳನ್ನು ಓದಿ ತಿಳಿಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಅವರು ನೆಹರೂ ಪಂಚವಾರ್ಷಿಕ ಯೋಜನೆಗಳು, ಕೃಷಿ ಅಭಿವೃದ್ಧಿ ಮತ್ತು ಅಣೆಕಟ್ಟುಗಳಿಗೆ ಆದ್ಯತೆ ನೀಡಿ ಆಧುನಿಕ ಭಾರತದ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.
ಮುಖ್ಯೋಪಾಧ್ಯಾಯಿನಿ ಪುಷ್ಪಾ ತಾವ್ರೊ, ಕಲಾವಿದ ವಿಶ್ವೇಶ್ವರ ಪರ್ಕಳ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು.