ಲೋಕಬಂಧು ನ್ಯೂಸ್ ಮಣಿಪಾಲ
ಜಿಲ್ಲೆಯಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಬ್ಯಾಂಕುಗಳು ಆರ್ಥಿಕ ನೆರವು ನೀಡಿ ಇನ್ನಷ್ಟು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ತಿಳಿಸಿದರು.ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ನಡೆದ ಜಿಲ್ಲಾ ಸಮಾಲೋಚನಾ ಸಮಿತಿ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ (ಪಿ.ಎಂ.ಎಫ್.ಎಂ.ಇ)ಯಡಿ ವಿವಿಧ ಘಟಕಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ವತಿಯಿಂದ 15 ಲಕ್ಷ ರೂ. ಅನುದಾನ ನೀಡಲಾಗುತ್ತಿದ್ದು, ಶೇ.50ರಷ್ಟು ಸಹಾಯಧನ ಸೌಲಭ್ಯ ಲಭ್ಯವಿದೆ. ಈ ಯೋಜನೆಯಡಿ ಸಹಾಯಧನ ಸೌಲಭ್ಯ ಪಡೆಯಲು ಯಾವುದೇ ಇಲಾಖೆಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಫಲಾಪೇಕ್ಷಿಗಳು ತಮ್ಮ ಮೊಬೈಲ್ ಮೂಲಕವೇ ಜಿಲ್ಲಾ ಸಂಪನ್ಮೂಲ ವ್ಯಕ್ತಿಗೆ ಅವಶ್ಯಕತೆ ದಾಖಲೆ ಸಲ್ಲಿಸಿ, ಬ್ಯಾಂಕ್'ಗಳಿಂದ ಅರ್ಥಕ ನೆರವು ಪಡೆಯಬಹುದಾಗಿದೆ. ಈ ಯೋಜನೆಯನ್ನು ಹೆಚ್ಚು ಜನರು ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರಾಯೋಜಿತ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದ್ದು, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ, ನಿಗದಿತ ಗುರಿ ಸಾಧನೆಗೆ ಮುಂದಾಗಬೇಕು. ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಸಾರ್ವಜನಿಕರ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೇ ಆದ್ಯತೆಯ ಮೇಲೆ ಅವುಗಳ ವಿಲೇವಾರಿಗೆ ಗಮನಹರಿಸಬೇಕು ಎಂದರು.
ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವತಿಯಿಂದ 78,101.82 ಕೋಟಿ ರೂ.ನಷ್ಟು ವಹಿವಾಟು ನಡೆದಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಹೆಚ್ಚು ವಹಿವಾಟು ನಡೆದಿದೆ. ಕಳೆದ ವರ್ಷದ ಸೆಪ್ಟಂಬರದಲ್ಲಿ ಬ್ಯಾಂಕಿಂಗ್ ಠೇವಣಿ ಅನುಪಾತ ಶೇ.48.62 ಇದ್ದು, ಪ್ರಸ್ತುತ ಶೇ.49.32ರಷ್ಟು ಏರಿಕೆಯಾಗಿದೆ.
ಆರ್.ಬಿ.ಐ
ನಿಯಮಾನುಸಾರ ಸಿ.ಡಿ ಅನುಪಾತ ಹೆಚ್ಚಿಸಲು ಎಲ್ಲಾ ಬ್ಯಾಂಕರ್'ಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಡಿವಿಜನಲ್ ಮ್ಯಾನೆಜರ್ ಅರ್ಚನಾ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ ಆದ್ಯತೆ ಮತ್ತು ಆದ್ಯತೆಯೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ 18,532.26 ಕೋಟಿ ರೂ. ವಾರ್ಷಿಕ ಕ್ರೆಡಿಟ್ ಯೋಜನೆ ಗುರಿ ನಿಗದಿಪಡಿಸಲಾಗಿದ್ದು, 2026ರ ಸೆಪ್ಟಂಬರ್ ಅಂತ್ಯದವರೆಗೆ 11,565.64 ಕೋಟಿ ರೂ. ಗುರಿ ಸಾಧಿಸಿ, ಶೇ.62.41 ಸಾಧನೆ ಮಾಡಲಾಗಿದೆ ಎಂದರು.
ಕೃಷಿ ವಲಯದಲ್ಲಿ 4,801.25 ಕೋಟಿ ರೂ. ನಿಗದಿತ ಗುರಿಗೆ 2,644.45 ಕೋಟಿ ರೂ. ಗುರಿ ಸಾಧಿಸಿ ಶೇ.55.08, ಎಂ.ಎಸ್.ಎಂ.ಇ ವಲಯಕ್ಕೆ 4,192.82 ಕೋಟಿ ರೂ. ನಿಗದಿತ ಗುರಿಗೆ 3,201.20 ಕೋಟಿ ರೂ. ಗುರಿ ಸಾಧಿಸಿ ಶೇ. 76.35 ರಷ್ಟು, ಶಿಕ್ಷಣ ವಲಯದಲ್ಲಿ 231.82 ಕೋಟಿ ರೂ. ನಿಗದಿತ ಗುರಿಗೆ 142.58 ಕೋಟಿ ರೂ. ಗುರಿ ಸಾಧಿಸಿ ಶೇ. 61.51ರಷ್ಟು, ವಸತಿ ಕ್ಷೇತ್ರಗಳಿಗೆ 264.54 ಕೋಟಿ ರೂ. ನಿಗದಿತ ಗುರಿಗೆ 140.90 ಕೋ. ರೂ. ಗುರಿ ಸಾಧಿಸಿ ಶೇ.53.26 ರಷ್ಟು, ಇತರೆ ಕ್ಷೇತ್ರಗಳಿಗೆ 373.47 ಕೋಟಿ ರೂ. ನಿಗಧಿತ ಗುರಿಗೆ, 307.89 ಕೋಟಿ ರೂ. ಗುರಿ ಸಾಧಿಸಿ ಶೇ. 82.44 ಸೇರಿದಂತೆ ಒಟ್ಟು ಆದ್ಯತಾ ವಲಯಕ್ಕೆ 9,863.89 ನಿಗದಿತ ಗುರಿಗೆ 6,437.03ರಷ್ಟು ಗುರಿ ಸಾಧಿಸಿ ಶೇ. 65.26ರಷ್ಟು ಹಾಗೂ ಆದ್ಯತೇತರ ವಲಯಗಳಿಗೆ 8,668.37 ಕೋಟಿ ರೂ. ನಿಗದಿತ ಗುರಿಗೆ, 5,128.61 ಕೋಟಿ ರೂ. ಗುರಿ ಸಾಧಿಸಿ ಶೇ. 59.16ರಷ್ಟು ಸಾಧಿಸಲಾಗಿದೆ ಎಂದರು.
ಸಭೆಯಲ್ಲಿ ನಬಾರ್ಡ್ ಡಿ.ಡಿ.ಎಂ ಸಂಗೀತಾ ಕಾರ್ಥಾ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ಜೆ.ಜೆ.ಎಂ ವಿಶ್ವನಾಥ ಶೆಟ್ಟಿ, ರುಡ್ ಸೆಟ್ ಸಂಸ್ಥೆ ನಿರ್ದೇಶಕ ಡಾ.ಬೊಮ್ಮಯ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.