ಅಪರಾಧ ರಹಿತ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಹಿರಿದು

ಲೋಕಬಂಧು ನ್ಯೂಸ್ ಉಡುಪಿ
ನಾಗರಿಕರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕಾದರೆ ಕಾನೂನು- ಸುವ್ಯವಸ್ಥೆ ಸದೃಢವಾಗಿರುವುದು ಬಹು ಮುಖ್ಯ. ಇಂಥ ಸೌಹಾರ್ದಮಯ ಅಪರಾಧ ರಹಿತ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೊಲೀಸರು ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ತಮ್ಮ ಒತ್ತಡಪೂರ್ಣ ಜೀವನ ಶೈಲಿಯಿಂದ ಬಿಡುಗಡೆ ಹೊಂದಲು ಕ್ರೀಡಾಕೂಟಗಳು ಸಹಕಾರಿ ಎಂದು ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್ ಹೇಳಿದರು.ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಸಮಾಜ ಅಭಿವೃದ್ದಿ ಹೊಂದಬೇಕಾದರೆ ಅಪರಾಧ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಸಮಾಜದಲ್ಲಿ ನ್ಯಾಯ, ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಪ್ರಪ್ರಥಮ ಇಲಾಖೆ ಪೊಲೀಸ್ ಇಲಾಖೆ. ಎಲ್ಲಾ  ಇಲಾಖೆಗಳೂ ಪೊಲೀಸರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ ಸ್ವಸ್ಥ ಸಮಾಜ ರೂಪಿಸುವಲ್ಲಿ ಸಹಕರಿಸುತ್ತಿವೆ.ದಿನವಿಡೀ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುವ ಪೊಲೀಸರು ಅತಿ ಹೆಚ್ಚು ಮಾನಸಿಕ ಒತ್ತಡ ಅನುಭವಿಸುತ್ತಿರುತ್ತಾರೆ. ತಮ್ಮ ಒತ್ತಡದ ಬದುಕಿನಿಂದ ಹೊರಬರಲು ಮತ್ತು ಕುಟುಂಬದ ಜೊತೆಗೆ ಕಾಲ ಕಳೆಯಲು ಕ್ರೀಡಾಕೂಟಗಳು ಸಹಕಾರಿ.ಆರೋಗ್ಯಕರ ಸ್ಪರ್ಧೆ ಮತ್ತು ಸಹೋದರತ್ವದ ಭಾವನೆಯಿಂದ ಸ್ಪರ್ಧಾಳುಗಳು ಆಟೋಟಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದರು.


ಪೊಲೀಸ್ ಇಲಾಖೆ ಸಾಮಾನ್ಯ ಜನರ ಜೊತೆ ಸೌಜನ್ಯದಿಂದ ಹಾಗೂ ಅಸಾಮಾಜಿಕ ತತ್ವಗಳೊಂದಿಗೆ ಕಠಿಣವಾಗಿ ಕಾರ್ಯನಿರ್ವಹಿಸಿ ಬಲ ಮತ್ತು ಸೇವೆಯ ಪ್ರಾಮುಖ್ಯತೆಯನ್ನು ಸಾರುತ್ತದೆ.


ಜಿಲ್ಲೆಯ ಪೊಲೀಸ್ ಇಲಾಖೆ ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದೆ. ಅಪರಾಧ ಪತ್ತೆಗೆ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ಸ್ಥಾಪಿಸಿ ಇಡೀ ಜಿಲ್ಲೆಗೆ ಕಣ್ಗಾವಲು ವ್ವವಸ್ಥೆ ಅಳವಡಿಸಲು ಮುಂದಾಗಿದೆ. ಅಪರಾಧ ಪ್ರಕರಣಗಳು ಇಳಿಕೆಯಾದಾಗ ಅಭಿವೃದ್ದಿ ಕಾರ್ಯಗಳಿಗೆ ವೇಗ ದೊರೆತು ಜಿಲ್ಲೆ ಪ್ರಗತಿ ಪಥದಲ್ಲಿ ಸಾಗುತ್ತದೆ ಎಂದರು.


ಎಪಿಸಿ ಜೀವನ್ ನಾಯ್ಕ ಕ್ರೀಡಾ ಜ್ಯೋತಿಯೊಂದಿಗೆ ವೇದಿಕೆಗೆ ಆಗಮಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.


ಆರ್.ಎಸ್.ಐ ಚಂದ್ರ ಎಂ. ಪ್ರಮಾಣ ವಚನ ಬೋಧಿಸಿದರು.


ಇದೇ ಸಂದರ್ಭದಲ್ಲಿ 100 ಮತ್ತು 200 ಮೀ. ಓಟ ಸ್ಪರ್ಧೆಯಲ್ಲಿ ಮಿಂಚುತ್ತಿರುವ ಎಸ್.ಜಿ.ಎಫ್.ಐ ರಾಜ್ಯ ದಾಖಲೆ ಹೊಂದಿರುವ ರಾಷ್ಟ್ರ ಮಟ್ಟದ ಕ್ರೀಡಾಪಟು, ಜಿಲ್ಲಾ ಮಟ್ಟದ ಅರ್ಜುನ ಪ್ರಶಸ್ತಿ ವಿಜೇತೆ ಸ್ತುತಿ ಪಿ. ಶೆಟ್ಟಿ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.


ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಸ್ವಾಗತಿಸಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ವಂದಿಸಿದರು. ಎಪಿಸಿ ಯೋಗೀಶ್ ನಾಯ್ಕ ನಿರೂಪಿಸಿದರು.