ಡಾ.ಕಲಾಂ ಬಳಸಿದ್ದ ಟಾಟಾನಾನೋ ಕಾರು ಮತ್ತು ಪೆನ್ನು 'ಮಂಜೂಷಾ'ಕ್ಕೆ ಕೊಡುಗೆ

ಲೋಕಬಂಧು ನ್ಯೂಸ್ ಉಜಿರೆ
ರಾಮೇಶ್ವರಂನಲ್ಲಿರುವ ಡಾ. ಎ.ಪಿ.ಜೆ.ಅಬ್ದುಲ್‌ ಕಲಾಂ ಅಂತರರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಧರ್ಮಸ್ಥಳದ 'ಮಂಜೂಷಾ' ವಾಹನಗಳ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲು ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಬಳಸಿದ್ದ ಟಾಟಾನಾನೋ ಕಾರು ಮತ್ತು ಅದರ ದಾಖಲೆ ಪತ್ರಗಳನ್ನು ಹೆಗ್ಗಡೆಯವರಿಗೆ ಹಸ್ತಾಂತರಿಸಲಾಯಿತು.ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭವನ್ನು ಸ್ಮರಿಸಿದ ಡಾ. ಹೆಗ್ಗಡೆಯವರು ಅವರ ಸರಳ ವ್ಯಕ್ತಿತ್ವ, ಸರ್ವಧರ್ಮ ಸಮನ್ವಯ ನೀತಿ, ದೇವರ ಮೇಲಿನ ದೃಢಭಕ್ತಿ ಮತ್ತು ವಿಶ್ವಾಸವನ್ನು ಸ್ಮರಿಸಿಕೊಂಡರು.


ಮಕ್ಕಳೊಂದಿಗೆ ಮಕ್ಕಳಾಗಿ ಮುಕ್ತವಾಗಿ ಬೆರೆತ ಸಂದರ್ಭ ಮತ್ತು ಸರಳ ವ್ಯಕ್ತಿತ್ವವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಹೆಗ್ಗಡೆಯವರು ಹೇಳಿದರು.


ಅವರ ಸ್ಮರಣಾರ್ಥ ನೀಡಿದ ಎರಡು ಅಮೂಲ್ಯ ವಸ್ತುಗಳಾದ ಟಾಟಾನಾನೋ ಕಾರು ಮತ್ತು ಅಪೂರ್ವ ಪೆನ್ನಿನ ಬಗ್ಗೆ ಹೆಗ್ಗಡೆ ಕೃತಜ್ಞತೆ ವ್ಯಕ್ತಪಡಿಸಿದರು.ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅಂತರರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ಎ.ಪಿ.ಜೆ.ಎಂ. ನಝೀಮಾ ಮರೈಕಾಯಲ್‌, ಕಾರ್ಯದರ್ಶಿ ಎ.ಪಿ.ಜೆ.ಎಂ. ಜೈನೀಲಾಭಿ ಡೀಮ್‌ ಮತ್ತು ಸಹಸಂಸ್ಥಾಪಕ ಎ.ಪಿ.ಜೆ.ಎಂ. ಶೇಖ್‌ ಸಲೀಂ ಉಪಸ್ಥಿತರಿದ್ದು ಪ್ರತಿಷ್ಠಾನದ ಪರವಾಗಿ ಟಾಟಾನಾನೋ ಕಾರು ಮತ್ತು ಪೆನ್ನನ್ನು ಹೆಗ್ಗಡೆಯವರಿಗೆ ದಾಖಲೆ ಸಹಿತ ನೀಡಿದರು.


ಡಾ.ಹೆಗ್ಗಡೆಯವರು ಪ್ರತಿಷ್ಠಾನಕ್ಕೆ ಕೃತಜ್ಞತೆ ವ್ಯಕ್ತಪಪಡಿಸಿ, ದಾನಿಗಳನ್ನು ಗೌರವಿಸಿದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್‌ ಕುಮಾರ್‌ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.