ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ: ಕೇಂದ್ರ ಜಲಶಕ್ತಿ ಸಚಿವರಿಗೆ ಸಿಎಂ ಪತ್ರ

ಲೋಕಬಂಧು ವಾರ್ತೆ
ಗುರುವಾರ, ಸೆಪ್ಟೆಂಬರ್ 14

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ: ಕೇಂದ್ರ ಜಲಶಕ್ತಿ ಸಚಿವರಿಗೆ ಸಿಎಂ ಪತ್ರ
ಬೆಂಗಳೂರು: ಕಾವೇರಿ ನೀರನ್ನೇ ಅವಲಂಬಿಸಿರುವ ರೈತರು, ಜನ ಹಾಗೂ ಜಾನುವಾರುಗಳ ಹಿತಾಸಕ್ತಿಯನ್ನು ಸಂಕಷ್ಟಕ್ಕೆ ದೂಡಿ ಕಾವೇರಿ ನೀರು ನಿಯಂತ್ರಣ ಸಮಿತಿ ತೀರ್ಪನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್  ಶೇಖಾವತ್ ಅವರಿಗೆ ಬರೆದಿರುವ ಪತ್ರದಲ್ಲಿ  ತಿಳಿಸಿದ್ದಾರೆ.

ಕಾವೇರಿ ನೀರು ನಿಯಂತ್ರಣ ಸಮಿತಿ ನಿರ್ಧರಿಸಿರುವಂತೆ 15 ದಿನಗಳ ಕಾಲ ಕೆ.ಆರ್.ಎಸ್. ಹಾಗೂ ಕಬಿನಿಯಿಂದ 5 ಸಾವಿರ ಕ್ಯೂಸೆಕ್ಸ್  ನೀರನ್ನು ಬಿಳಿಗುಂಡ್ಲುನಿಂದ ಹರಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ, ಕರ್ನಾಟಕದ ಮನವಿಯನ್ನು ಪರಿಗಣಿಸಿ ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ಧಾರ ಮರುಪರಿಶೀಲಿಸುವಂತೆ ಕೋರಿದ್ದಾರೆ.

ಬರ ಪೀಡಿತವಾಗಿರುವ ರಾಜ್ಯದ ಜನತೆ ಹಾಗೂ ಜಾನುವಾರುಗಳ ಹಿತಾಸಕ್ತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ, ಸಮಿತಿಯ ಹಿಂದಿನ ನಿರ್ದೇಶನ ಪಾಲಿಸಿದ್ದು ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಬಹುತೇಕ ತಾಲೂಕುಗಳು ಮುಂಗಾರು ವೈಫಲ್ಯದಿಂದ  ತೀವ್ರ ಬರಕ್ಕೆ ತುತ್ತಾಗಿವೆ ಎಂದು ಸಿಎಂ ವಿವರಿಸಿದ್ದಾರೆ.

ಜೂನ್ ತಿಂಗಳಿಂದ ಸೆಪ್ಟೆಂಬರ್ ಮಧ್ಯದ ವರೆಗೂ 92 ದಿನಗಳ ಕಾಲ 100 ಟಿಎಂಸಿ ನೀರನ್ನು ತಮಿಳುನಾಡು ಬಳಸಿಕೊಂಡಿದ್ದು, ಇದು ಹಿಂದೆ 1987-88, 2002-03, 2012-13, 2016-17 ಹಾಗೂ 2017-18ರ ಬರ ಪರಿಸ್ಥಿತಿಯಲ್ಲಿ ಬಳಕೆಯಾದ ನೀರಿಗಿಂತಲೂ ಹೆಚ್ಚಾಗಿದೆ. ಕರ್ನಾಟಕದ ಜಲಾಶಯಗಳಲ್ಲಿ ಸಂಕಷ್ಟದ ಸ್ಥಿತಿಯಿದ್ದರೂ ತಮಿಳುನಾಡು ಭತ್ತವನ್ನು ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ಪತ್ರದಲ್ಲಿ ಮುಖ್ಯಮಂತ್ರಿ ವಿವರಿಸಿದ್ದಾರೆ.

ಹವಾಮಾನ ಮುನ್ಸೂಚನೆಯಂತೆ ಮಳೆಯಾಗುವ ಲಕ್ಷಣಗಳಿಲ್ಲ.  ಮೆಟ್ಟೂರು ಜಲಾಶಯದಲ್ಲಿ ಸೆ.12ರಂದು 24.233 ಟಿಎಂಸಿ  ಸಂಗ್ರಹವಿದ್ದು ಪ್ರಸ್ತುತ ಬಿಡುಗಡೆಯಾಗಿರುವ ನೀರನ್ನು ಪರಿಗಣಿಸಿದರೆ, ತಮಿಳುನಾಡಿನ ಅವಶ್ಯಕತೆ ಯನ್ನು ಪೂರೈಸಲು ಸಾಕಾಗುವಷ್ಟು ನೀರು ಲಭ್ಯವಿದೆ.

ಕರ್ನಾಟಕದ ಬೆಳೆಗಳ ರಕ್ಷಣೆಗೆ 70 ಟಿಎಂಸಿ, ಕುಡಿಯುವ ನೀರಿಗೆ 33 ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ. ನಮ್ಮ ಸಂಗ್ರಹ 53 ಟಿಎಂಸಿ ಮಾತ್ರವಿದ್ದು, ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಈ ಸಂಗ್ರಹ ಸಾಕಾಗುವುದಿಲ್ಲ ಎಂದು  ಮುಖ್ಯಮಂತ್ರಿ ಪತ್ರದಲ್ಲಿ ವಿವರಿಸಿದ್ದಾರೆ.