ಲೋಕಬಂಧು ನ್ಯೂಸ್ | ಉಡುಪಿ, ಸೆ.1
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್‌ವಾನಿಯಲ್ಲಿ ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಣ ಮಾಡಿರುವ ಕೃತ್ಯದ ವಿರುದ್ಧ ಧ್ವನಿ ಎತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಮುಖಂಡ ಎಂ.ಎ. ಗಫೂರ್ ಮಾತನಾಡಿ, ವೇದಿಕೆ ಶುದ್ಧೀಕರಣ ಮಾಡಿರುವುದು ಸಂವಿಧಾನ ವಿರೋಧಿ ಕೃತ್ಯವಾಗಿದ್ದು ಅದನ್ನು ವಿರೋಧಿಸಿರುವ ರಾಹುಲ್ ಗಾಂಧಿ ಮೇಲೆ ದುರುದ್ದೇಶಪೂರಿತವಾಗಿ ಪ್ರಕರಣ ದಾಖಲಿಸಲಾಗಿದೆ ಎಂದರು.
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಉತ್ತರಾಖಂಡ ಸರ್ಕಾರ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ವಕ್ತಾರೆ ವರೋನಿಕಾ ಕರ್ನೇಲಿಯೊ ಮಾತನಾಡಿ, ದೇಶದಲ್ಲಿ ಬಿಜೆಪಿ ಆಡಳಿತ ಬಂದ ಬಳಿಕ ಪ್ರಜಾಪ್ರಭುತ್ವದ ಬುನಾದಿ ಅಲುಗಾಡುತ್ತಿದೆ. ಸಂವಿಧಾನ ಪರ ಧ್ವನಿಯನ್ನು ಧಮನಿಸಲಾಗುತ್ತಿದೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಅವರನ್ನು ಕುಗ್ಗಿಸುವ ಕೆಲಸ ಸದಾ ನಡೆಯುತ್ತಿದೆ. ಉತ್ತರಾಖಂಡದ ಹಲ್ದ್‌ವಾನಿಯಲ್ಲಿ ವೇದಿಕೆಯನ್ನು ಶುದ್ಧೀಕರಣ ಮಾಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಿಂತಕ ಡಾ.ಗಣನಾಥ ಎಕ್ಕಾರು, ಪಕ್ಷ ಪ್ರಮುಖರಾದ ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್, ಡಾ.ಸುನಿತಾ ಶೆಟ್ಟಿ, ಗಣೇಶ್ ನೇರ್ಗಿ, ಶಶಿಧರ ಶೆಟ್ಟಿ, ಮಹಾಬಲ ಕುಂದರ್, ನರಸಿಂಹಮೂರ್ತಿ, ಮೀನಾಕ್ಷಿ ಮಾಧವ ಮೊದಲಾದವರಿದ್ದರು.
