ಕ್ಯಾನ್ಸರ್‌ ಪೀಡಿತ ಯುವಕರ ಕಾಲು ಉಳಿಸಿದ ಆದರ್ಶ ಆಸ್ಪತ್ರೆ ವೈದ್ಯರ ಸಾಧನೆ

ಲೋಕಬಂಧು ನ್ಯೂಸ್ ಉಡುಪಿ, ಆ.31
ಕ್ಯಾನ್ಸರ್‌ ಬದುಕಿನ ಅಂತ್ಯ ಎಂಬ ಭಾವನೆ ಇರುವ ಕಾಲ ಇದೀಗ ಬದಲಾಗುತ್ತಿದೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನ ಹಾಗೂ ಪರಿಣತ ವೈದ್ಯಕೀಯ ತಂಡದ ಪ್ರಯತ್ನದಿಂದ ಕ್ಯಾನ್ಸರ್‌ ಪೀಡಿತ ಅಂಗವನ್ನು ಉಳಿಸಿಕೊಂಡು ರೋಗಿಯ ಜೀವನದ ಗುಣಮಟ್ಟ ಕಾಪಾಡಲು ಸಾಧ್ಯ. ಉಡುಪಿಯ ಆದರ್ಶ ಆಸ್ಪತ್ರೆಯ ವೈದ್ಯರ ತಂಡ ಇಬ್ಬರು ಯುವಕರಿಗೆ ಅತ್ಯಂತ ಸಂಕೀರ್ಣವಾದ ಎರಡು ‘ಲಿಂಬ್ ಸಾಲ್ವೇಜ್’ (ಅಂಗ ಉಳಿಸುವ) ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿ ಆ ಮೂಲಕ ಕ್ಯಾನ್ಸರ್‌ ಗಡ್ಡೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಜೊತೆಗೆ ಇಬ್ಬರು ರೋಗಿಗಳ ಕಾಲುಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ.ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿಸ್ಟ್‌ ಡಾ. ಅನಂತ್ ಎಸ್. ಮಠದ್, ಆರ್ಥೋಪೆಡಿಕ್ ಆಂಕೋಸರ್ಜನ್‌ ಡಾ. ನವನೀತ್ ಎಸ್. ಕಾಮತ್, ಅರಿವಳಿಕೆ ತಜ್ಞ ಡಾ. ಸುಖೇನ್ ಶೆಟ್ಟಿ ಹಾಗೂ ನರ್ಸಿಂಗ್‌ ಸಿಬ್ಬಂದಿ ಈ ಶಸ್ತ್ರಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


ಮೂಳೆಯ ಕ್ಯಾನ್ಸರ್‌ ಪೀಡಿತ ಯುವಕನ ಕಾಲು ಉಳಿಕೆಯ
ಮೊದಲ ಪ್ರಕರಣದಲ್ಲಿ 31 ವರ್ಷದ ಯುವಕನ ಬಲ ತೊಡೆಯ ಮೂಳೆ (ಫೀಮರ್‌)ಯಲ್ಲಿ ತೀವ್ರ ಸ್ವರೂಪದ ಕೊಂಡ್ರೊಸಾರ್ಕೋಮಾ ಕ್ಯಾನ್ಸರ್‌ ಪತ್ತೆಯಾಗಿತ್ತು. ಗಡ್ಡೆಯ ಗಾತ್ರ ದೊಡ್ಡದಾಗಿದ್ದು, ಪ್ರಮುಖ ರಕ್ತನಾಳಗಳ ಸಮೀಪದಲ್ಲಿದ್ದ ಕಾರಣ ಕಾಲು ಕತ್ತರಿಸುವ ಅಗತ್ಯ ಎದುರಾಗಿತ್ತು. ಆದರೆ, ವೈದ್ಯರ ತಂಡ ಸವಾಲನ್ನು ಸ್ವೀಕರಿಸಿ, ಕ್ಯಾನ್ಸರ್‌ ಪೀಡಿತ ಮೂಳೆಯ ಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಿತು.


ಪ್ರಮುಖ ರಕ್ತನಾಳ ಹಾಗೂ ನರಗಳನ್ನು ಸಂರಕ್ಷಿಸಿ, ಅದರ ಸ್ಥಳದಲ್ಲಿ ಮೆಗಾ ಎಂಡೋಪ್ರೊಸ್ಥೆಸಿಸ್‌ ಅಳವಡಿಸಲಾಯಿತು. ಅದರಿಂದ ರೋಗಿ ಶೀಘ್ರದಲ್ಲೇ ನಡೆದಾಡುವಂತಾಯಿತು.


ಲಿಪೊಸಾರ್ಕೋಮಾ ಗಡ್ಡೆ ಯಶಸ್ವಿ ತೆರವು
ಎರಡನೇ ಪ್ರಕರಣದಲ್ಲಿ ಯುವಕನ ತೊಡೆಯಲ್ಲಿ ದೊಡ್ಡ ಗಾತ್ರದ ಲಿಪೊಸಾರ್ಕೋಮಾ ಗಡ್ಡೆ ಇತ್ತು. ಗಡ್ಡೆ ಪ್ರಮುಖ ರಕ್ತನಾಳ ಹಾಗೂ ನರಗಳ ಸುತ್ತ ಆವರಿಸಿಕೊಂಡಿತ್ತು. ಶಸ್ತ್ರಚಿಕಿತ್ಸೆ ವೇಳೆ ಈ ರಕ್ತನಾಳಗಳಿ ಅಥವಾ ನರಗಳಿಗೆ ಹಾನಿಯಾದರೆ ಕಾಲಿನ ಕಾರ್ಯಕ್ಷಮತೆ ಕಳೆದುಕೊಳ್ಳುವ ಅಪಾಯವಿತ್ತು.


ಡಾ. ಅನಂತ್ ಎಸ್. ಮಠದ್ ಅವರು ಅತ್ಯಂತ ನಾಜೂಕಾಗಿ ಗಡ್ಡೆಯನ್ನು ಪ್ರಮುಖ ನರ ಹಾಗೂ ರಕ್ತನಾಳಗಳಿಂದ ಬೇರ್ಪಡಿಸಿ, ಸಂಪೂರ್ಣವಾಗಿ ಹೊರತೆಗೆದರು. ಅದರಿಂದ ಕಾಲು ಉಳಿಸುವುದರ ಜೊತೆಗೆ ಅದರ ಕಾರ್ಯಕ್ಷಮತೆಯನ್ನೂ ಕಾಪಾಡಲು ಸಾಧ್ಯವಾಯಿತು.


'ಲಿಂಬ್ ಸಾಲ್ವೇಜ್ ಶಸ್ತ್ರಚಿಕಿತ್ಸೆ ಸರ್ಜಿಕಲ್ ಆಂಕಾಲಜಿ ಕ್ಷೇತ್ರದ ಅತ್ಯಂತ ಸವಾಲಿನ ಪ್ರಕ್ರಿಯೆಗಳಲ್ಲಿ ಒಂದು. ಹಿಂದೆ ಇಂಥ ಮುಂದುವರಿದ ಮೂಳೆ ಕ್ಯಾನ್ಸರ್‌ ಪ್ರಕರಣಗಳಲ್ಲಿ ಕಾಲು ತೆಗೆಯುವುದೇ ಸಾಮಾನ್ಯ ಮಾರ್ಗವಾಗಿತ್ತು. ಆದರೆ, ಆಧುನಿಕ ತಂತ್ರಜ್ಞಾನದಿಂದ ಕ್ಯಾನ್ಸರ್‌ ನಿರ್ಮೂಲನೆ ಮಾಡುವ ಜೊತೆಗೆ ರೋಗಿಯ ಸ್ವಾವಲಂಬನೆ ಮತ್ತು ಜೀವನದ ಗುಣಮಟ್ಟವನ್ನು ಕಾಪಾಡಬಹುದು. ರೋಗಿ ತನ್ನ ಕಾಲಿನ ಮೇಲೆ ನಡೆದುಕೊಂಡು ಆಸ್ಪತ್ರೆಯಿಂದ ಹೊರಡುವುದನ್ನು ನೋಡುವುದೇ ನಮ್ಮ ಪಾಲಿನ ನಿಜವಾದ ಗೆಲುವು' ಎಂದು ಸರ್ಜಿಕಲ್ ಆಂಕಾಲಜಿಸ್ಟ್‌ ಡಾ. ಅನಂತ್ ಎಸ್. ಮಠದ್ ತಿಳಿಸಿದ್ದಾರೆ.


ಈ ಸಾಧನೆ ಉಡುಪಿಯ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಕ್ಯಾನ್ಸರ್‌ ಎಂದರೆ ಬದುಕಿನ ಅಂತ್ಯವಲ್ಲ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ನೀಡಲು ನಾವು ಬಯಸುತ್ತೇವೆ. ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡಲ್ಲಿ ಜೀವದ ಜೊತೆಗೆ ಜೀವನ ಗುಣಮಟ್ಟವನ್ನೂ ಉಳಿಸಬಹುದು ಎಂದು ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ. ಎಸ್. ಚಂದ್ರಶೇಖರ್ ಹೇಳಿದ್ದಾರೆ.