ಲೋಕಬಂಧು ವಾರ್ತೆ
ಸೋಮವಾರ, ಸೆಪ್ಟೆಂಬರ್ 11
ಮೀನುಗಾರರ ಸಮಸ್ಯೆಗಳಿಗೆ ಫೆಡರೇಶನ್ ಧ್ವನಿ
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ
ಫೆಡರೇಶನ್ ನ 2022- 23ನೇ ಸಾಲಿನ ವಾರ್ಷಿಕ ಮಹಾಸಭೆ ಪಾಂಡೇಶ್ವರ ಎಮ್ಮೆಕೆರೆ ರಮಾ
ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಫೆಡರೇಶನ್ ಅಧ್ಯಕ್ಷ, ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ
ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಕರಾವಳಿ ಜಿಲ್ಲೆಯ ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಹಲವು ದಶಕಗಳಿಂದ ಸ್ಪಂದಿಸಿ ಮೀನುಗಾರರ ಸಮಸ್ಯೆಗಳಿಗೆ ಧ್ವನಿಯಾಗಿ ಫೆಡರೇಶನ್ ಕಾರ್ಯನಿರ್ವಹಿಸುತ್ತಿದ್ದು, ಮೀನುಗಾರರಿಗೆ ಅನುಕೂಲವಾಗುವಂತೆ ಮೀನಿಗೆ ಉತ್ತಮ ದರ ನಿಗದಿಪಡಿಸುವ ನಿಟ್ಟಿನಲ್ಲಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಹಾಗೂ ಮುಂದಿನ ದಿನಗಳಲ್ಲಿ ಫೆಡರೇಶನ್ ಮೂಲಕ ತಾಲೂಕು ಕೇಂದ್ರಗಳಲ್ಲಿ ಮತ್ಸ್ಯ ಕ್ಯಾಂಟೀನ್ ಆರಂಭಿಸಿ, ಮೀನಿನ ಖಾದ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವ ಯೋಜನೆಗೆ ಆಡಳಿತ ಮಂಡಳಿ ಕಾರ್ಯಪ್ರವೃತ್ತವಾಗಿದೆ ಎಂದರು.
ಫೆಡರೇಶನ್ ಮಹಾಸಭೆಯಲ್ಲಿ 61 ಬಿ ವರ್ಗದ ಸದಸ್ಯರು ಮತ್ತು 1,050 ಸಿ ವರ್ಗದ ಸದಸ್ಯರು ಮತ್ತು ಸರಕಾರದ ಪ್ರತಿನಿಧಿಗಳು ಭಾಗವಹಿಸಿದ್ದರು.
ಕೇಂದ್ರ ಪುರಸ್ಕೃತ ಉಳಿತಾಯ ಪರಿಹಾರ, ಮತ್ಸ್ಯಾಶ್ರಯ ವಸತಿ ಸಹಾಯಧನ ಏರಿಕೆ, ಅಂಬಿಗರ ಚೌಡಯ್ಯ ನಿಗಮದ ವಿದ್ಯಾರ್ಥಿ ವೇತನ, ಮೀನುಗಾರ ಮಹಿಳೆಯರ ಶೂನ್ಯ ಬಡ್ಡಿ ದರ ಸಾಲ ಸಹಿತ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಫೆಡರೇಶನ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಹಾಗೂ ಪ್ರಾಥಮಿಕ ಮೀನುಗಾರ ಸಹಕಾರಿ ಸಂಸ್ಥೆ ಸದಸ್ಯರಿಗೆ ತರಬೇತಿ ಕಾರ್ಯಾಗಾರ ಹಾಗೂ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಶೀಘ್ರದಲ್ಲೇ ಏರ್ಪಡಿಸಲಾಗುವುದು.
ಕಾಪುನಲ್ಲಿ ಬ್ಯಾಂಕಿಂಗ್ ವಿಭಾಗ ಸದ್ಯದಲ್ಲೇ ಕಾರ್ಯಾಚರಿಸಲಿದ್ದು, ಫೆಡರೇಶನ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಕಾರದಿಂದ ಮಂಗಳೂರು ನಗರದ ಕೇಂದ್ರ ಭಾಗವಾದ ಊರ್ವ ಸ್ಟೋರ್ ನಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಮತ್ಸ್ಯ ಸಂಪದ ನೂತನ ಪ್ರಧಾನ ಕಚೇರಿ ಕಟ್ಟಡ ಹಾಗೂ ಸಮುದಾಯ ಭವನ ಕಾಮಗಾರಿ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.
ಮಹಾಸಭೆಯಲ್ಲಿ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರ ವತಿಯಿಂದ ಶಾಸಕರಾಗಿ ಆಯ್ಕೆಯಾದ ಸಂಸ್ಥೆ ಅಧ್ಯಕ್ಷ ಯಶಪಾಲ್ ಎ. ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾಗಿ ಪದೋನ್ನತಿಗೊಂಡ ಹರೀಶ್ ಕುಮಾರ್ ಹಾಗೂ ದಕ್ಷಿಣ ಕನ್ನಡ ಮೊಗವೀರ ಮಹಿಳಾ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷರಾಗಿ ಆಯ್ಕೆಯಾದ ಸಂಸ್ಥೆ ನಿರ್ದೇಶಕಿ ಉಷಾರಾಣಿ ಅವರನ್ನು ಗೌರವಿಸಲಾಯಿತು.
ಮೀನುಗಾರಿಕೆ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅನ್ಮೋಲ್ ಗಿರೀಶ್ ಕುಮಾರ್ ಬೋಳೂರು ಮತ್ತು ಹರ್ಷಲ್ ಎಸ್. ಸಾಲ್ಯಾನ್ ಅವರಿಗೆ ವ್ಯಾಸಂಗ ವೆಚ್ಚದ ಚೆಕ್ ವಿತರಿಸಲಾಯಿತು.
ಜನರಲ್ ಮರೈನ್ ಫಿಶರೀಸ್ ಚೆನ್ನೈನ ಹಿರಿಯ ವಿಜ್ಞಾನಿ ಜೋಯಿ ಕೊಯಿಕುಡನ್ ಕೃತಕ ರೀಫ್ ಮೀನುಗಾರಿಕೆ ವಿಧಾನದ ಬಗ್ಗೆ ಸದಸ್ಯರಿಗೆ ಮಾಹಿತಿ ಕಾರ್ಯಾಗಾರ ನಡೆಸಿದರು.
ಈ ಸಂದರ್ಭದಲ್ಲಿ ಗಣ್ಯರಾದ ಆನಂದ ಪಿ. ಸುವರ್ಣ, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಡಿವಿಜನಲ್ ಮ್ಯಾನೇಜರ್ ಮುಧುಪ್ ದ್ವಿವೇದಿ ಇದ್ದರು.
ಫೆಡರೇಶನ್ ನ 2022- 23 ನೇ ವಾರ್ಷಿಕ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ದರ್ಶನ್ ಕೆ.ಟಿ. ಮಂಡಿಸಿದರು.
ಸಭೆಯಲ್ಲಿ ಫೆಡರೇಶನ್ ನ ಆಡಳಿತ ಮಂಡಳಿ ನಿರ್ದೇಶಕರಾದ ರಾಮಚಂದ್ರ ಕುಂದರ್, ಸುಧೀರ್ ಶ್ರೀಯಾನ್, ಸುರೇಶ್ ಸಾಲ್ಯಾನ್, ಸತೀಶ್ ಸಾಲ್ಯಾನ್, ದೇವಪ್ಪ ಕಾಂಚನ್, ಶಿವಾಜಿ ಎಸ್. ಅಮೀನ್, ಆನಂದ, ಸುಧಾಕರ, ಚಿದಾನಂದ, ಬೇಬಿ ಎಚ್. ಸಾಲ್ಯಾನ್, ಇಂದಿರಾ ಇದ್ದರು.
