ಲೋಕಬಂಧು ನ್ಯೂಸ್ | ಉಡುಪಿ, ಏ.18
ಕೊಡವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಂದಾಳು ಪ್ರಸಾದರಾಜ್ ಕಾಂಚನ್ ಸಂಕಲ್ಪಿಸಿದಂತೆ ಲೋಕಕಲ್ಯಾಣಾರ್ಥವಾಗಿ ಮೇ 14ರಿಂದ 19ರ ವರೆಗೆ ಕ್ಷೇತ್ರದಲ್ಲಿ ಮೊತ್ತಮೊದಲ ಬಾರಿಗೆ ಅಪೂರ್ವ ಮಹಾರುದ್ರ ಯಾಗ ನಡೆಯಲಿದೆ ಎಂದು ಸೇವಾದಾರರಾದ ಪ್ರಸಾದರಾಜ್ ಕಾಂಚನ್ ತಿಳಿಸಿದರು.
ಶನಿವಾರ ದೇವಳದಲ್ಲಿ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ನಾಡಿನ ಜನರ ಸುಭಿಕ್ಷೆಗಾಗಿ ನಡೆಸಲಾಗುವ ಮಹಾರುದ್ರ ಯಾಗದ ಜೊತೆಗೆ ಧಾರ್ಮಿಕ, ಮನರಂಜನೆ, ಕ್ರೀಡೋತ್ಸವ, ಆರೋಗ್ಯ ಶಿಬಿರ, ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸ್ಪೀಕರ್ ಯು.ಟಿ. ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಸೇರಿದಂತೆ ರಾಜ್ಯದ ವಿವಿಧ ಸಚಿವರು, ಶಾಸಕರು, ಸಂಸದರು ಮತ್ತು ಗಣ್ಯರು ಭಾಗವಹಿಸುವರು. ಶೃಂಗೇರಿ ಜಗದ್ಗುರುಗಳು, ಪಲಿಮಾರು, ಒಡಿಯೂರು ಮತ್ತು ಕಾಣಿಯೂರು ಶ್ರೀಗಳು, ಆನಂದ ಗುರೂಜಿ ಮೊದಲಾದ ಯತಿಗಳು ಆಗಮಿಸುವರು.
ಮೇ 10ರಿಂದ 20ರ ವರೆಗೆ ಮನೋರಂಜನೆಗಾಗಿ ಜಾಯಿಂಟ್ ವ್ಹೀಲ್, ಮೋಜುಮಸ್ತಿಗಳು, ಆಟಿಕೆಗಳು, ಆಟೋಟ ಪರಿಕರಗಳು, ಬೃಹತ್ ವಸ್ತುಪ್ರದರ್ಶನ ಮಾರಾಟ ಮಳಿಗೆಗಳು ಮನರಂಜಿಸಲಿವೆ ಎಂದರು.
ಹೊರೆಕಾಣಿಕೆ
ಮೇ 14ರಂದು ಮಹಾರುದ್ರ ಯಾಗದ ಪೂರ್ವಭಾವಿಯಾಗಿ ಮಲ್ಪೆಯಿಂದ ಕೊಡವೂರು ದೇವಸ್ಥಾನದ ವರೆಗೆ ಭವ್ಯ ಹೊರೆಕಾಣಿಕೆ ಮೆರವಣಿಗೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. 15ರಂದು ಮಹಾರುದ್ರ ಯಾಗ, ಗಣಯಾಗ ಧಾರ್ಮಿಕ ವಿಧಿವಿಧಾನಗಳು ಅರಂಭಗೊಳ್ಳಲಿವೆ. ಸಂಜೆ ಧಾರ್ಮಿಕ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಮೇ 16ರಂದು ಪ್ರಸಾದ್ ನೇತ್ರಾಲಯ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ.
ಗಂಗಾರತಿ
ಮೇ 17ರಂದು ಮಲ್ಪೆ ಬೀಚ್'ನಲ್ಲಿ ವಿವಿಧ ಸಾಂಪ್ರದಾಯಿಕ ಕ್ರೀಡಾಕೂಟಗಳ ಸ್ಪರ್ಧೆ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ವಾರಣಾಸಿಯ ಪುರೋಹಿತರಿಂದ ಗಂಗಾರತಿ ನಡೆಯಲಿದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸುವರು. ರಾತ್ರಿ 8ರಿಂದ ದಕ್ಷಿಣ ಭಾರತದ ಪ್ರಖ್ಯಾತ ಕಲಾವಿದೆ ಮಂಗ್ಲಿ ಅವರಿಂದ ಶಿವಗಾನಾಮೃತ ನಡೆಯಲಿದೆ.
ಉದ್ಯೋಗ ಮೇಳ
ಮೇ 18ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಚಾಲನೆ ನೀಡುವರು. ಸುಮಾರು 50 ಕಂಪನಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದು, ಇನ್ನಷ್ಟು ಕಂಪನಿಗಳನ್ನು ಆಹ್ವಾನಿಸಲಾಗುವುದು. ಸುಮಾರು 2 ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಪ್ರಸಾದರಾಜ್ ಕಾಂಚನ್ ತಿಳಿಸಿದರು.
19ರಂದು ಯಾಗ ಪೂರ್ಣಾಹುತಿ
ಮೇ 19ರಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ದಿವ್ಯೋಪಸ್ಥಿತಿಯಲ್ಲಿ ಮಹಾರುದ್ರ ಯಾಗದ ಪೂರ್ಣಾಹುತಿ ನಡೆಯಲಿದೆ. ಐದು ದಿನಗಳ ಕಾಲ ಮಹಾರುದ್ರ ಯಾಗ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಪ್ರಖ್ಯಾತ ಕಲಾವಿದರಿಂದ ಪ್ರತಿನಿತ್ಯ ನಡೆಯಲಿದೆ. ಪ್ರತಿದಿನ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಸ್ಥಳೀಯ ಪ್ರತಿಭೆಗಳಿಗೆ ಅವಕಾಶ
ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಸ್ತುಪ್ರದರ್ಶನ ನಡೆಯುವ ವೇದಿಕೆಯಲ್ಲಿ `ಪ್ರತಿಭೆ ನಿಮ್ಮದು ವೇದಿಕೆ ನಮ್ಮದು' ವಿಶಿಷ್ಟ ಕಾರ್ಯಕ್ರಮ ಅಯೋಜಿಸಲಾಗಿದ್ದು, ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಸಂಜೆ 5ರಿಂದ ರಾತ್ರಿ 8ರ ವರೆಗೆ ಕಾರ್ಯಕ್ರಮ ನಡೆಯಲಿದ್ದು, ಆಸಕ್ತರು ಮಹಾರುದ್ರ ಯಾಗ ಕಚೇರಿಯಲ್ಲಿ ಹೆಸರು ನೋಂದಾಯಿಸಹುದು.
ಯಾಗ ಸಂಕಲ್ಪ
ಲೋಕಕಲ್ಯಾಣಾರ್ಥವಾಗಿ ಮಹಾರುದ್ರ ಯಾಗ ಆಯೋಜಿಸಲಾಗುತ್ತಿದ್ದರೂ ಸಾಮಾನ್ಯ ಜನರೂ ಯಾಗದಲ್ಲಿ ಭಾಗಿಗಳಾಗಿ ಪುಣ್ಯಶಾಲಿಗಳಾಗಬೇಕೆಂಬ ಆಶಯದಿಂದ ಸುಮಾರು 5 ಸಾವಿರ ಮಹಿಳೆಯರು ಮತ್ತು ಪುರುಷರಿಗೆ ಮಹಾರುದ್ರ ಯಾಗದ ಸಂಕಲ್ಪದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದೂ ಪ್ರಸಾದರಾಜ್ ಕಾಂಚನ್ ವಿವರಿಸಿದರು.
ಕ್ಷೇತ್ರದ ತಂತ್ರಿಗಳಾದ ವಾದಿರಾಜ ತಂತ್ರಿ ಧಾರ್ಮಿಕ ವಿಧಿ ವಿಧಾನಗಳ ಮಾಹಿತಿ ನೀಡಿದರು.
ಕೊಡವೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಪ್ರಧಾನ ಸಂಚಾಲಕ ನಾರಾಯಣ ಪೂಜಾರಿ, ಸಹಸಂಚಾಲಕ ರಮೇಶ್, ನಂದಕಿಶೋರ್, ಬಾಲಕೃಷ್ಣ ಕೊಡವೂರು, ಧನಂಜಯ ಮಲ್ಪೆ, ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ವಾದಿರಾಜ ಸಾಲ್ಯಾನ್ ಮತ್ತು ಕೆ.ಬಾಬ, ಜನಾರ್ದನ ಕೊಡವೂರು, ಹರಿಯಪ್ಪ ಕೋಟ್ಯಾನ್, ಡಾ. ವಿಜಯೇಂದ್ರ ವಸಂತ್ ಮೊದಲಾದವರಿದ್ದರು.
ಇದೇ ಸಂದರ್ಭದಲ್ಲಿ ಸ್ಟಿಕರ್ ಬಿಡುಗಡೆ ಹಾಗೂ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು
.jpg)
.jpg)