ಲೋಕಬಂಧು ನ್ಯೂಸ್ | ಉಡುಪಿ, ಏ.18
ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳು ಮೊಬೈಲ್ ಫೋನ್'ಗಳಿಗೆ ಅತಿಯಾಗಿ ದಾಸರಾಗುತ್ತಿದ್ದು, ಅವರ ನೈಸರ್ಗಿಕ ಬೌದ್ಧಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಈ ಗಂಭೀರ ಸಮಸ್ಯೆಯನ್ನು ಮನಗಂಡು ಮಕ್ಕಳನ್ನು ಮೊಬೈಲ್ ಚಟದಿಂದ ಮುಕ್ತಗೊಳಿಸಲು ಪುತ್ತಿಗೆ ಮಠ ವತಿಯಿಂದ ಮೇ 14ರಿಂದ ಮೊಬೈಲ್ ವರ್ಜನ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಇಲ್ಲಿನ ಗೀತಾ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಇಲ್ಲದಿದ್ದರೆ ಬದುಕೇ ಇಲ್ಲ ಎಂಬ ಹಂತಕ್ಕೆ ತಲುಪುತ್ತಿರುವುದು ಆತಂಕಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ 6ರಿಂದ 12 ವರ್ಷದ ಒಳಗಿನ ಮಕ್ಕಳಿಗಾಗಿ ಹಿರಿಯಡಕ ಸಮೀಪದ ಪುತ್ತಿಗೆ ಮೂಲಮಠದ ಪರಿಸರದಲ್ಲಿ ವಾಸದೊಂದಿಗೆ ನಾಲ್ಕು ದಿನಗಳ ಶಿಬಿರ ನಡೆಯಲಿದೆ.
ಮೇ 14ರಿಂದ 18ರ ವರೆಗೆ ನಡೆಯುವ ಶಿಬಿರದಲ್ಲಿ ಮಕ್ಕಳಿಗೆ ಮೊಬೈಲ್ ಬಳಸದಂತೆ ನಿರ್ಬಂಧ ವಿಧಿಸಿ ಅದಕ್ಕೆ ಬದಲಾಗಿ ದೇಸೀ ಕ್ರೀಡೆಗಳು, ಸಾಂಪ್ರದಾಯಿಕ ಆಟಗಳು ಮತ್ತು ಆಧ್ಯಾತ್ಮಿಕ- ಧಾರ್ಮಿಕ ಚಿಂತನೆಯಲ್ಲಿ ತೊಡಗಿಸಲಾಗುತ್ತದೆ. ಮೊಬೈಲ್ ಇಲ್ಲದೆಯೂ ಸಂತೋಷದಿಂದ ಇರಲು ಸಾಧ್ಯವಿದೆ ಎಂಬ ವಾಸ್ತವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ಈ ಶಿಬಿರದ ಮೂಲ ಉದ್ದೇಶ.
ಸರ್ಕಾರಗಳೂ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧ ಕುರಿತ ಕಾನೂನು ರೂಪಿಸಲು ಚಿಂತನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ಈ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳ ಹೆತ್ತವರು ಮತ್ತು ಪಾಲಕರಿಗೂ ಈ ಕುರಿತು ಮಾಹಿತಿ ನೀಡಲಾಗುವುದು ಎಂದರು.
ವಿಶೇಷ ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಮಕ್ಕಳ ಪೋಷಕರು ಮೇ 10ರೊಳಗಾಗಿ ತಮ್ಮ ಅರ್ಜಿಯನ್ನು ಉಡುಪಿಯ ಗೀತಾ ಮಂದಿರ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಲು ಗೀತಾ ಮಂದಿರದಲ್ಲಿ ಉಮಾಪ್ರಸಾದ್ ಹಾಗೂ ಕೆ.ವಿ. ರಮಣ್ ಅವರನ್ನು ನೇಮಕ ಮಾಡಲಾಗಿದೆ.
ಮೇ 14ರಂದು ಬೆಳಿಗ್ಗೆ 10 ಗಂಟೆಗೆ ಪುತ್ತಿಗೆ ಮಠದ ನೃಸಿಂಹ ಸಭಾಭವನದಲ್ಲಿ ಶಿಬಿರದ ಉದ್ಘಾಟನೆ ನಡೆಯಲಿದ್ದು ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀಗಳು ಕರೆ ನೀಡಿದರು.
ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ ಮತ್ತು ಕಾರ್ಯದರ್ಶಿ ರಮೇಶ ಭಟ್ ಇದ್ದರು.
