ಏ.20ರಂದು ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಕ್ರೀಡಾಕೂಟ

ಲೋಕಬಂಧು ನ್ಯೂಸ್ ಉಡುಪಿ, ಏ.19
ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ವತಿಯಿಂದ ಮಣಿಪಾಲದ ಮಾಧವಕೃಪಾ ಶಾಲೆಯಲ್ಲಿ ಏ.20ರಂದು ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಉದ್ಘಾಟನೆ ಮತ್ತು  ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಕ್ರೀಡಾಕೂಟ ನಡೆಯಲಿದೆ.ಅಂದು ಬೆಳಗ್ಗೆ 10.30ಕ್ಕೆ ಮಣಿಪಾಲ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಅಂತರರಾಷ್ಟ್ರೀಯ ಬಾಸ್ಕೆಟ್ಬಾಲ್ ಮಾಜಿ ಆಟಗಾರ ಜುಗನ್ ಎಸ್. ಧ್ಯಾನೇಶ್ವರನ್, ಮಾಧವ ಕೃಪಾ ಶಾಲೆಯ ಕರೆಸ್ಪಾಂಡೆಂಟ್ ಚಂದ್ರಶೇಖರ ಪ್ರಭು ಎನ್., ಪ್ರಾಂಶುಪಾಲೆ ಸ್ವಾತಿ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ ಎಂದು ಅಸೋಸಿಯೇಷನ್ ಅಧ್ಯಕ್ಷ ಪ್ರಸಾದರಾಜ್ ಕಾಂಚನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಜಿಲ್ಲೆಯ ಬಾಸ್ಕೆಟ್ ಬಾಲ್ ಕ್ರೀಡಾಪಟುಗಳಿಗೆ ಜಿಲ್ಲೆಯ ಹೆಸರಿನಲ್ಲಿ ಅಧಿಕೃತವಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಲು ಅವಕಾಶ ಇರಲಿಲ್ಲ. ಅಂಥ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತಾಗಲು ರಾಜ್ಯ, ರಾಷ್ಟ್ರ ಮಟ್ಟದ ಅಸೋಸಿಯೇಷನ್ ಸಹಕಾರದಿಂದ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಆರಂಭಿಸಲಾಗಿದೆ. ಶೀಘ್ರ ಅಜ್ಜರಕಾಡು ಕ್ರೀಡಾಂಗಣದಲ್ಲಿರುವ ಬಾಸ್ಕೆಟ್ ಬಾಲ್ ಕ್ರೀಡಾಂಗಣವನ್ನು ಸುಸಜ್ಜಿತಗೊಳಿಸಲಾಗುವುದು. ಜಿಲ್ಲಾ ಕ್ರೀಡಾಪಟುಗಳಿಗೆ ಉಟೋಪಚಾರ ಸಹಿತ ತರಬೇತಿಗೆ ಚಿಂತನೆ ನಡೆಸಿರುವುದಾಗಿ ಎಂದರು.


ಕಾರ್ಯದರ್ಶಿ ಎ.ಕೆ. ಹುಸೇನ್ ಮಾತನಾಡಿ, 14,17 ಮತ್ತು 19ರ ವಯೋಮಾನದಂತೆ ಮೂರು ವಿಭಾಗದಲ್ಲಿ ಬಾಲಕ, ಬಾಲಕಿಯರ ಪ್ರತ್ಯೇಕ ಪಂದ್ಯಾಟ ನಡೆಯಲಿದೆ. ಈಗಾಗಲೇ 18 ತಂಡ ನೋಂದಣಿ ಮಾಡಿಕೊಂಡಿದೆ ಎಂದರು.


ಕೋಶಾಧಿಕಾರಿ ವಿನಯ್, ಅಸೋಸಿಯೇಷನ್ ಸದಸ್ಯ ನಂದಕಿಶೋರ್ ಉಪಸ್ಥಿತರಿದ್ದರು.