ಲೋಕಬಂಧು ನ್ಯೂಸ್ ಶೃಂಗೇರಿ, ಏ.19
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಏ.18ರಿಂದ 22ರ ವರೆಗೆ ಶಂಕರ ಜಯಂತ್ಯುತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜರುಗಲಿವೆ.ಪ್ರತಿದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 12.30ರ ರವರೆಗೆ ಶ್ರೀ ಶಂಕರ ಭಗವತ್ಪಾದರ ಮೂರ್ತಿಗೆ ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಚತುರ್ವೇದ, ಪ್ರಸ್ಥಾನತ್ರಯ ಭಾಷ್ಯ, ವಿದ್ಯಾರಣ್ಯ ವೇದಭಾಷ್ಯ, ಶಂಕರ ದಿಗ್ವಿಜಯ ಮುಂತಾದ ಪಾರಾಯಣಗಳು ನಡೆಯಲಿದೆ. ಸಂಜೆ 5ರಿಂದ 8ರ ವರೆಗೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಸಾನ್ನಿಧ್ಯದಲ್ಲಿ ವೇದ, ಸ್ವಸ್ತಿವಾಚನ, ವಿದ್ವಾಂಸರಿಂದ ಉಪನ್ಯಾಸ ನಡೆಯಲಿದೆ.
ಏ.21ರಂದು ಶಂಕರ ಜಯಂತಿ ಪ್ರಯುಕ್ತ ಮಧ್ಯಾಹ್ನ 12ರಿಂದ 2ರ ವರೆಗೆ ಉಭಯ ಜಗದ್ಗುರುಗಳವರಿಂದ ಶಂಕರ ಭಗವತ್ಪಾದರ ಮೂರ್ತಿಗೆ ವಿಶೇಷ ಪೂಜೆ, ಕನಕಾಭಿಷೇಕ ಹಾಗೂ ಸಂಜೆ ಅನುಗ್ರಹ ಭಾಷಣ ನಡೆಯಲಿದೆ.
ಏ.22ರಂದು ಬೆಳಗ್ಗೆ 8.30ಕ್ಕೆ ಶಂಕರಾಚಾರ್ಯರ ಮಹಾರಥೋತ್ಸವ ನಡೆಯಲಿದ್ದು, ಸಂಜೆ ವೇದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ, ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.