ಲೋಕಬಂಧು ನ್ಯೂಸ್ | ಉಡುಪಿ, ಏ.17
ಸ್ಥಳೀಯ ನಗರಸಭೆಯ ಗೋಪಾಲಪುರ ವಾರ್ಡಿನ ನಯ್ಯಂಪಳ್ಳಿ ಪ್ರದೇಶದಲ್ಲಿ 4 ದಶಕಗಳಿಂದ ಕುಡಿಯುವ ನೀರಿನ ಸಂಪರ್ಕ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಕುಟುಂಬಗಳಿಗೆ ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ನಗರಸಭೆಯ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಮೂಲಕ ಹಲವು ದಶಕಗಳ ಕನಸು ಸಾಕಾರಗೊಂಡಿದೆ.
ಸ್ಥಳಕ್ಕೆ ಭೇಟಿ ನೀಡಿ ಈಚೆಗೆ ನೀರಿನ ಸಂಪರ್ಕ ಉದ್ಘಾಟಿಸಿದ ಶಾಸಕ ಯಶಪಾಲ್ ಸುವರ್ಣ, ಈ ಭಾಗದ ಸುಮಾರು 50 ಮನೆಗಳಿಗೆ ಹಲವು ದಶಕಗಳಿಂದ ಕುಡಿಯುವ ನೀರು ಸಂಪರ್ಕ ಇಲ್ಲದೆ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ನನ್ನ ಮನವಿಯ ಮೇರೆಗೆ ಸ್ಥಳೀಯ ಮುಖಂಡರಾದ ಉಮೇಶ್ ಶೆಟ್ಟಿ ಹಾಗೂ ಸುಧೀಶ್ ಕುಮಾರ್ ತಮ್ಮ ಖಾಸಗಿ ಜಮೀನಿನಲ್ಲಿ ಪೈಪ್ ಲೈನ್ ಅಳವಡಿಸಲು ಅವಕಾಶ ನೀಡಿ ಮನೆಗಳಿಗೆ ನೀರಿನ ಸಂಪರ್ಕ ನೀಡಲು ವಿಶೇಷ ಸಹಕಾರ ನೀಡಿದರು.
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಹರೀಶ್ ಶೆಟ್ಟಿ, ಶ್ರೀ ಗಿರಿಧರ ಆಚಾರ್ಯ, ಮಂಜುಳಾ ನಾಯಕ್ ವಿಶೇಷ ಮುತುವರ್ಜಿಯಿಂದ ಈ ಭಾಗದ ಜನತೆಯ ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ದಿನೇಶ್ ಪೈ, ಚಿನ್ಮಯ ಮೂರ್ತಿ, ಮಂಜಪ್ಪ ಮೊದಲಾದವರಿದ್ದರು.
