ಲೋಕಬಂಧು ನ್ಯೂಸ್ | ಕಾಪು, ಏ.17
ಇಲ್ಲಿನ ಪಾಂಗಾಳ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರು ಚಾಲಕ ಸಾವನ್ನಪ್ಪಿದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆಯ ಲೋಕಾಪುರದಿಂದ ಮಂಗಳೂರಿಗೆ ಸರಕು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕ ಮಂಜುನಾಥ ಗೌಡ ಅವರು ಮಂಗಳೂರಿನಲ್ಲಿ ಕೋಕ್ ಲೋಡ್ ಮಾಡಿಕೊಂಡು ಕೊಪ್ಪಳದ ಗಿಣಿಗೇರಿಗೆ ತೆರಳುತ್ತಿದ್ದರು.
ಆ ವೇಳೆ ಪಾಂಗಾಳ ವಿದ್ಯಾವರ್ಧಕ ಶಾಲೆಯ ಎದುರು ಏಕಮುಖ ಸಂಚಾರ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಕಿಯಾ ಕಾರು ಲಾರಿಗೆ ಢಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು ಕಾರು ಚಾಲಕ ಶ್ರೇಯಸ್ ಆಚಾರ್ ಗಂಭೀರವಾಗಿ ಗಾಯಗೊಂಡು ವಾಹನದಲ್ಲೇ ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು.
ಕಾರಿನಲ್ಲಿದ್ದ ಡಾರ್ವಿನ್ ಹಾಗೂ ಸೂರ್ಯ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
