ಲೋಕಬಂಧು ನ್ಯೂಸ್ ಉಡುಪಿ, ಏ.19
ಮಳೆಗಾಲದಲ್ಲಿ ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಅಗ್ನಿಶಾಮಕ ದಳದ ತಂಡವನ್ನು ಸಜ್ಜುಗೊಳಿಸಬೇಕು. ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯಶಪಾಲ್ ಸುವರ್ಣ ಸೂಚಿಸಿದರು.ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಮಳೆಗಾಲದ ಪೂರ್ವಸಿದ್ಧತಾ ಸಭೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.
ಮಳೆಗಾಲದಲ್ಲಿ ಮರ ಬಿದ್ದು ವಿದ್ಯುತ್ ತಂತಿಗಳು ತುಂಡಾಗಿ ಬಿದ್ದರೆ ಮೆಸ್ಕಾಂನವರು ತುರ್ತಾಗಿ ಸ್ಪಂದಿಸಬೇಕು. ಅಪಾಯಕಾರಿ ಮರದ ಕೊಂಬೆಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಮುತುವರ್ಜಿ ವಹಿಸಬೇಕು ಎಂದರು.
ಮಣಿಪಾಲದ ಸಿಂಡಿಕೇಟ್ ಸರ್ಕಲ್'ನಿಂದ ಜಿಲ್ಲಾಧಿಕಾರಿ ಕಚೇರಿ ಕಡೆಗೆ ಹೋಗುವ ರಸ್ತೆಯ ಒಂದು ಭಾಗದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ವಾರಾಹಿ ಯೋಜನೆಯ ಪೈಪ್ ಲೈನ್ ಮತ್ತು ಅದಾನಿ ಸಂಸ್ಥೆಯ ಗ್ಯಾಸ್ ಪೈಪ್ಲೈನ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ರಸ್ತೆ ದುರಸ್ತಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ಸೂಚಿಸಿದರು.
ಉಡುಪಿಯಲ್ಲಿ ರಂಗ ಮಂದಿರ ಕಾಮಗಾರಿ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಅದರ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿ ಸಹಾಯಕ ಕೃಷಿ ನಿರ್ದೇಶಕ ಕಲ್ಲೇಶ್ ಪ್ರಸಾದ್ ಮಾತನಾಡಿ, ಉಡುಪಿ ತಾಲೂಕಿನಲ್ಲಿ 300 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಮೇ ಎರಡನೇ ವಾರದಿಂದ ಬಿತ್ತನೆ ಬೀಜದ ವಿತರಣೆ ನಡೆಯಲಿದೆ ಎಂದರು.
ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಬಂದರಿನ ಪ್ರವೇಶ ದ್ವಾರದ ಬಳಿಯ ಕಾಮಗಾರಿ ಇನ್ನೂ ಆಗಿಲ್ಲ ಎಂದು ಬಂದರು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಫರ್ಝಾನ ವಂದಿಸಿದರು.