ರುದ್ರದೇವರ ಆರಾಧನೆಯಿಂದ ಶ್ರೇಯಸ್ಸು

ಲೋಕಬಂಧು ನ್ಯೂಸ್ | ಉಡುಪಿ, ಏ.17
ಮಹಾರುದ್ರ ದೇವರು ಮನೋನಿಯಾಮಕ ದೇವರು. ಆತ ಮನಸ್ಸನ್ನು ಆಳುವವ. ಮನುಷ್ಯನ ಜೀವನದಲ್ಲಿ ಮಾನಸಿಕ ಧೈರ್ಯ ಅತಿ ಮುಖ್ಯ. ಮನಸ್ಸು ಶಾಂತವಾಗಿದ್ದರೆ ಬದುಕು ಸುಖಮಯವಾಗುತ್ತದೆ. ಅಶಾಂತ ಮನಸ್ಸು ಜೀವನವನ್ನು ಕಷ್ಟಕರವಾಗಿಸುತ್ತದೆ. ಆದ್ದರಿಂದ ಮನಸ್ಸನ್ನು ಸಮತೋಲನದಲ್ಲಿಡುವ ಶಕ್ತಿ ನೀಡುವ ದೇವರಾದ ಮಹಾರುದ್ರನನ್ನು ಭಕ್ತಿಯಿಂದ ಆರಾಧಿಸಿದಾಗ ಶ್ರೇಯಸ್ಸಾಗುತ್ತದೆ ಎಂದು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋ ತ್ಸವ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕಸಭೆ ಉದ್ಘಾಟಿಸಿ, ಆಶೀರ್ವಚನ ನೀಡಿದರು.


ಮಹಾರುದ್ರನ ಅನುಗ್ರಹದಿಂದ ನಮ್ಮೊಳಗಿನ ದುರ್ಗುಣಗಳನ್ನು ಜಯಿಸಿ, ಸದ್ಗುಣಗಳನ್ನು ಬೆಳೆಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಕ್ಷೇತ್ರದಲ್ಲಿ ಸಂಕಲ್ಪಿಸಿರುವಂತೆ ಪಾರ್ಕಿಂಗ್ ವ್ಯವಸ್ಥೆಗೆ ಬೇಕಾದ ಸ್ಥಳ ಖರೀದಿಗೆ ತೆಗೆದುಕೊಂಡ ಯೋಜನೆ ಶೀಘ್ರ ಫಲಪ್ರದವಾಗಲಿ ಎಂದವರು ಹಾರೈಸಿದರು.


ಜಾಗೃತ ದೇವರು
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್ ಮಾತನಾಡಿ, ದೇವಸ್ಥಾನದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲ ಭಕ್ತರು ಪಾಲ್ಗೊಳ್ಳುವುದರೊಂದಿಗೆ ತನು, ಮನ, ಧನಗಳಿಂದ ಸಹಕರಿಸಬೇಕು. ಜಾಗೃತ ದೇವರಾದ ಶಿವದೇವರ ಸೇವೆಗೈದು ಅವನಲ್ಲಿ ಪ್ರಾರ್ಥನೆ ಸಲ್ಲಿಸಿದಾಗ ನಮ್ಮ ಮನೋಕಾಮನೆಗಳು ಈಡೇರಲಿವೆ ಎಂದರು.


ಸನ್ಮಾನ
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಪಿ.ವಾಸುದೇವ ಉಪಾಧ್ಯಾಯ ಮತ್ತು ಪರಿಚಾರಕಿ ರಾಮಕ್ಕ ಅವರನ್ನು ಡಾ. ಜಿ. ಶಂಕರ್ ಸನ್ಮಾನಿಸಿದರು. ಮೋಹನದಾಸ ನಾಯಕ್ ಪರ್ಕಳ ಅವರನ್ನು ಗೌರವಿಸಲಾಯಿತು.


ವಾಸ್ತುತಜ್ಞ ಜಿ.ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಪ್ರಸ್ತಾವನೆಗೈದು, ಈ ಪರಿಸರದಲ್ಲಿರುವ ಅತೀ ದೊಡ್ಡ ದೇವಸ್ಥಾನ ಇದಾಗಿದ್ದು, 8 ಮಾಗಣೆಗೆ ಸಂಬಂಧಿಸಿದೆ. ದೊಡ್ಡ ಊರಾದ ಇಲ್ಲಿಗೆ ಪಡುಮುನ್ನೂರು ಎಂಬುದು ಪ್ರಾಚೀನ ಹೆಸರು. ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೆ ಸ್ಥಳಾವಕಾಶದ ಕೊರತೆ ಇದೆ. ಸ್ಥಳ ಖರೀದಿ ಕಾರ್ಯ ಯಶಸ್ವಿಯಾಗಿ ನೆರವೇರಲು ದೇವರು ಅನುಗ್ರಹಿಸಲಿ ಎಂದು ಆಶಿಸಿದರು.


ಉಜ್ವಲ್ ಡೆವಲಪರ್ಸ್‌ನ ಪುರುಷೋತ್ತಮ ಪಿ. ಶೆಟ್ಟಿ, ಉಚ್ಚಿಲ ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಮಿತಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿನೇಶ್ ಪುತ್ರನ್, ಎಂ. ಪ್ರಭಾಕರ ಶೆಟ್ಟಿ, ಶೇಖರ ಶೆಟ್ಟಿ ಯು.ಸುದೇಶ್ ಶೇಟ್, ರಾಜೇಶ್ ಬಿ., ವಿದ್ಯಾಲತಾ ಯು. ಶೆಟ್ಟಿ ಮತ್ತು ಶಮಿತಾ ಎಸ್. ಭಂಡಾರಿ ಉಪಸ್ಥಿತರಿದ್ದರು.


ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಮಾಧವ ಪೂಜಾರಿ ಸ್ವಾಗತಿಸಿದರು. ಅರ್ಪಿತಾ ಪ್ರಶಾಂತ ಶೆಟ್ಟಿ ನಿರೂಪಿಸಿ, ವಂದಿಸಿದರು.