ಕಡಿಮೆ ದರದಲ್ಲಿ ವಾಯ್ಸ್ ಎಸ್ಎಂಎಸ್ ಕಡ್ಡಾಯ

ಲೋಕಬಂಧು ನ್ಯೂಸ್ | ನವದೆಹಲಿ, ಏ.9
ಟೆಲಿಕಾಂ ಗ್ರಾಹಕರಿಗೆ ನೆರವಾಗುವ ನಿರ್ಧಾರವಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ಕರಡು ನಿಯಮಾವಳಿ ಬಿಡುಗಡೆ ಮಾಡಿದೆ.ಟೆಲಿಕಾಂ ಗ್ರಾಹಕ ರಕ್ಷಣೆ (13ನೇ ತಿದ್ದುಪಡಿ) ನಿಯಮ 2026 ಅಡಿಯಲ್ಲಿ ಟೆಲಿಕಾಂ ಕಂಪನಿಗಳು ಡೇಟಾ ಇಲ್ಲದ ಧ್ವನಿ ಮತ್ತು ಎಸ್ಎಂಎಸ್ ಮಾತ್ರ ಪ್ಯಾಕ್‌ಗಳನ್ನು ಕಡಿಮೆ ಬೆಲೆಯಲ್ಲಿ ನೀಡಬೇಕು ಎಂದು ಪ್ರಸ್ತಾಪಿಸಲಾಗಿದೆ.


ಈ ನಿಯಮಾವಳಿಯ ಮುಖ್ಯ ಉದ್ದೇಶ ಡೇಟಾ ಸೇವೆಗಳ ಅಗತ್ಯವಿಲ್ಲದ ಗ್ರಾಹಕರಿಗೆ—ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು, ಹಿರಿಯ ನಾಗರಿಕರು ಹಾಗೂ ಫೀಚರ್ ಫೋನ್ ಬಳಕೆದಾರರಿಗೆ ಕೈಗೆಟುಕುವ ಸೇವೆ ಒದಗಿಸುವುದಾಗಿದೆ.


ಏನು ಬದಲಾವಣೆ?
ಹೊಸ ಕರಡು ನಿಯಮಾವಳಿ ಪ್ರಕಾರ ಡೇಟಾ ಇರುವ ಪ್ಯಾಕ್‌ಗಳಿಗೆ ಹೋಲಿಸಿದರೆ ವಾಯ್ಸ್ + ಎಸ್ಎಂಎಸ್ ಮಾತ್ರ ಪ್ಯಾಕ್‌ಗಳು ಕಡಿಮೆ ದರದಲ್ಲಿ ಇರಬೇಕು ಹಾಗೂ ಎಲ್ಲಾ ಮಾನ್ಯತೆ ಅವಧಿಗಳಲ್ಲೂ ಈ ಪ್ಯಾಕ್‌ಗಳು ಲಭ್ಯವಾಗಬೇಕು. ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಪ್ಲಾನ್ ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ ಎಂದು ಟ್ರಾಯ್ ತಿಳಿಸಿದೆ.


ಏಕೆ ಈ ನಿರ್ಧಾರ?
ಟ್ರಾಯ್ ಪ್ರಕಾರ, ದೇಶದಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಡೇಟಾ ಬಳಸುವುದಿಲ್ಲ. ಸ್ಮಾರ್ಟ್‌ಫೋನ್ ಬಳಸದ ಅಥವಾ ಡೇಟಾ ಅಗತ್ಯವಿಲ್ಲದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮೊಬೈಲ್ ಸೇವೆ ಒದಗಿಸುವುದು ಮತ್ತು ಅನಗತ್ಯ ಸೇವೆಗಳಿಗಾಗಿ ಹಣ ಪಾವತಿಸುವುದನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶ. ವಿಶೇಷವಾಗಿ ಗ್ರಾಮೀಣ ಬಳಕೆದಾರರು, ಹಿರಿಯ ನಾಗರಿಕರು, ಸರಳ ಫೋನ್ ಬಳಕೆದಾರರಿಗೆ ಅನಗತ್ಯವಾಗಿ ಡೇಟಾ ಪ್ಯಾಕ್‌ಗಳಿಗಾಗಿ ಹೆಚ್ಚು ಹಣ ಪಾವತಿಸುವ ಪರಿಸ್ಥಿತಿ ಉಂಟಾಗುತ್ತಿದೆ. ಇದನ್ನು ತಿದ್ದಲು ಈ ಹೊಸ ಕ್ರಮ ಕೈಗೊಳ್ಳಲಾಗಿದೆ.


ಸಾರ್ವಜನಿಕ ಅಭಿಪ್ರಾಯ ಆಹ್ವಾನ
ಈ ಕರಡು ನಿಯಮಾವಳಿ  ಕುರಿತು ಟೆಲಿಕಾಂ ಕಂಪನಿಗಳು, ಗ್ರಾಹಕ ಸಂಘಟನೆಗಳು, ಸಾಮಾನ್ಯ ಜನರು ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಏಪ್ರಿಲ್ 28ರೊಳಗೆ ಸಲ್ಲಿಸಬಹುದು ಎಂದು ಟ್ರಾಯ್ ತಿಳಿಸಿದೆ.