ಕಾಂಗ್ರೆಸ್ ಶಾಸಕ ಕುಲಕರ್ಣಿಗೆ ಜೀವಾವಧಿ ಶಿಕ್ಷೆ; ಶಾಸಕ ಸ್ಥಾನ ರದ್ದು

ಲೋಕಬಂಧು ನ್ಯೂಸ್ | ಬೆಂಗಳೂರು, ಏ.17
ಧಾರವಾಡದ ಜಿ.ಪಂ. ಮಾಜಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನ ರದ್ದಾಗಿದೆ.
ಬುಧವಾರ ಶಾಸಕ ಕುಲಕರ್ಣಿ ಸೇರಿದಂತೆ 16 ಮಂದಿಯನ್ನು ದೋಷಿ ಎಂದು ತೀರ್ಪು ಪ್ರಕಟಿಸಿದ್ದ ಕೋರ್ಟ್‌, ಶುಕ್ರವಾರ ಶಿಕ್ಷೆಯ ಅವಧಿ ಪ್ರಕಟಿಸಿದೆ. ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(4)ರ ಪ್ರಕಾರ ತಕ್ಷಣದಿಂದಲೇ ವಿನಯ್‌ ಕುಲಕರ್ಣಿ ಶಾಸಕ ಸ್ಥಾನ ರದ್ದಾಗಿದೆ.


ವಿನಯ್ ಕುಲಕರ್ಣಿ ಮುಂದಿನ ದಾರಿ?
ಜನಪ್ರತಿನಿಧಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ ತಕ್ಷಣವೇ ಶಾಸಕ ಕುಲಕರ್ಣಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಮೇಲಿನ ನ್ಯಾಯಾಲಯ ಕೇವಲ ಅವರ ಜೈಲು ಶಿಕ್ಷೆಯ ಮೇಲಷ್ಟೇ ಅಲ್ಲದೇ ಅವರ ಮೇಲಿನ ಅಪರಾಧ ನಿರ್ಣಯದ ಮೇಲೂ ತಡೆಯಾಜ್ಞೆ ನೀಡಿದರೆ ಮಾತ್ರ ಅವರ ಶಾಸಕ ಸ್ಥಾನ ಮರಳಿ ಸಿಗುತ್ತದೆ. ಕೇವಲ ಜಾಮೀನು ಲಭಿಸಿದರೆ ಸ್ಥಾನ ಉಳಿಯುವುದಿಲ್ಲ.