ಪೇಜಾವರಶ್ರೀ ಚಾತುರ್ಮಾಸ್ಯ ವ್ರತ ಸಮಿತಿ ಅಧ್ಯಕ್ಷರ ಆಯ್ಕೆ

ಲೋಕಬಂಧು ನ್ಯೂಸ್, ಉಡುಪಿ, ಏ.19
ಮೊತ್ತಮೊದಲ ಬಾರಿಗೆ ಉಡುಪಿ ಪೇಜಾವರ ಮಠದ ಯತಿಯೋರ್ವರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದು, ಅಯೋಧ್ಯಾ ರಾಮಮಂದಿರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ 39ನೇ ಚಾತುರ್ಮಾಸ್ಯ ವ್ರತವನ್ನು ನವದೆಹಲಿಯ ಪೇಜಾವರ ಶಾಖಾ ಮಠದಲ್ಲಿ ನಡೆಸಲು ಸಂಕಲ್ಪಿಸಿದ್ದಾರೆ.ಆ ನಿಮಿತ್ತ ಪೂರ್ವಭಾವಿ ಸಮಾಲೋಚನ ಸಭೆ ಈಚೆಗೆ ನವದೆಹಲಿ ವಸಂತ್ ಕುಂಜ್'ನಲ್ಲಿರುವ ಪೇಜಾವರ ಮಠದಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಿತು. ಸುಪ್ರೀಂ ಕೋರ್ಟ್ ವಕೀಲ, ವಿಶ್ವಹಿಂದೂ ಪರಿಷತ್ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಛುಗ್ ಉಪಸ್ಥಿತರಿದ್ದು ಪೂರ್ಣ ಸಹಕಾರದ ಭರವಸೆ ನೀಡಿದರು.


ನವದೆಹಲಿ ಕೇಂದ್ರೀಯ ಸಂಸ್ಕೃತ ವಿ.ವಿ. ಉಪಕುಲಪತಿ ಹಾಗೂ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಶ್ರೀನಿವಾಸ ಆಚಾರ್ಯ ವರಖೇಡಿ ಸ್ವಾಗತಿಸಿದರು. ನವದೆಹಲಿ ಪೇಜಾವರ ಮಠದ ವ್ಯವಸ್ಥಾಪಕ ಹಾಗೂ ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ. ವಿಠೋಬಾಚಾರ್ಯ ಸರ್ವರ ಸಹಕಾರ ವಿನಂತಿಸಿದರು. ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಗೌರ್ ಇದ್ದರು.


ಸಂದೇಶ ನೀಡಿದ ಪೇಜಾವರ ಶ್ರೀಪಾದರು, ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅನುಗ್ರಹಪೂರ್ಣ ಮಾರ್ಗದರ್ಶನದಲ್ಲಿ ಹಿಂದೂ ಸಮಾಜದ ಶ್ರೇಯಸ್ಸಿಗಾಗಿ ಚಿಂತಿಸುವ ಜೊತೆಗೆ ಶ್ರೀಮಠ ಭಕ್ತರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿಕೊಂಡು ಬಂದಿದೆ. ಈ ಬಾರಿಯ ಚಾತುರ್ಮಾಸ್ಯವೂ ಅದರ ಭಾಗವಾಗಬೇಕು. ದೇಶ, ಧರ್ಮಕ್ಕೆ ಒದಗಿರುವ ಸಮಸ್ಯೆಗಳ ಬಗೆಗೂ ಪ್ರಾಮಾಣಿಕ ಚಿಂತನೆ ಮಾಡಬೇಕಾಗಿದೆ ಎಂದರು.


ಶ್ರೀಗಳ 39ನೇ ಚಾತುರ್ಮಾಸ್ಯ ವ್ರತದ ಸಂಯೋಜನ ಸಮಿತಿ ಅಧ್ಯಕ್ಷರನ್ನಾಗಿ ಅಲೋಕ್ ಕುಮಾರ್ ಅವರನ್ನು ನಿಯುಕ್ತಿಗೊಳಿಸಿ ಘೋಷಿಸಲಾಯಿತು. ಭೂಪೇಂದ್ರ ಸಿಂಗ್ ಅವರಿಂದ ಭಜನ್ ನಡೆಯಿತು. ಸುಮನ್ ಆಚಾರ್ಯ ನಿರೂಪಿಸಿದರು. ವೀರನಾರಾಯಣ ಆಚಾರ್ಯ ಪಾಂಡುರಂಗಿ ವಂದಿಸಿದರು.