ಲೋಕಬಂಧು ನ್ಯೂಸ್ | ಮೂಡುಬಿದಿರೆ, ಏ.9
ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಮೂಡುಬಿದಿರೆಯ ದಿಶಾಳ ಮುಂದಿನ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಯವುದಾಗಿ ಹಾಗೂ ಆಕೆಯ ಅಭೂತಪೂರ್ವ ಸಾಧನೆಗಾಗಿ 3 ಲಕ್ಷ ರೂ. ನಗದು ನೀಡುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಘೋಷಿಸಿದರು.
ಅಮ್ಮನ ಅಗಲಿಕೆ ದುಃಖದ ನಡುವೆಯೂ ಸಾಧನೆ
ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ, ಕಾಮಸ್೯ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾಗಿರಿ ಸಮೀಪದ ಪುತ್ತಿಗೆಪದವು ನಿವಾಸಿ ದಿಶಾ, ಅರ್ಥಶಾಸ್ತ್ರ ಪರೀಕ್ಷೆಯ ಹಿಂದಿನ ದಿನವೇ ತಾಯಿಯನ್ನು ಕಳೆದುಕೊಂಡು ನೋವು ಅನುಭವಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಧೃತಿಗೆಡದ ದಿಶಾ ಪರೀಕ್ಷೆ ಬರೆದು ಮಾದರಿಯಾಗಿದ್ದಾರೆ.
ಪರೀಕ್ಷೆಯ ಸಿದ್ಧತೆಗಾಗಿ ದಿಶಾ ಪ್ರತಿದಿನ ಮುಂಜಾನೆ 3:30 ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದರು. ಕಾಲೇಜಿನಲ್ಲಿ ನಡೆಸುತ್ತಿದ್ದ ಸರಣಿ ಪರೀಕ್ಷೆಗಳು ಹಾಗೂ ಪಠ್ಯಕ್ರಮವನ್ನು ಶೀಘ್ರವಾಗಿ ಪೂರ್ಣಗೊಳಿಸಿರುವುದು ಅವರ ಯಶಸ್ಸಿಗೆ ಪೂರಕವಾಯಿತು. ಇಂಗ್ಲಿಷ್ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸುವುದು ಕಷ್ಟ ಎಂಬ ಸಣ್ಣ ಆತಂಕವಿತ್ತಾದರೂ ಉಪನ್ಯಾಸಕರು ನೀಡಿದ ಮಾರ್ಗದರ್ಶನದಿಂದಾಗಿ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು ಎಂದವರು ತಿಳಿಸಿದ್ದಾರೆ.
ಗಣಿತ ಪರೀಕ್ಷೆಯ ಮುನ್ನಾದಿನ ರಾತ್ರಿ ತಾಯಿ ಸವಿತಾ ಆಕಸ್ಮಿಕವಾಗಿ ಬಿದ್ದಿದರು. ಅರ್ಥಶಾಸ್ತ್ರ ಪರೀಕ್ಷೆಯ ಮುನ್ನಾದಿನ ದಿಶಾ ಅವರಿಗೆ ತಾಯಿಯ ಸಾವು ಸಿಡಿಲು ಬಡಿದಂತಾಗಿತ್ತು. ಅಂಥ ಕಠಿನ ಪರಿಸ್ಥಿತಿಯಲ್ಲಿ ಉಪನ್ಯಾಸಕಿ ವೀಣಾ ಅವರು ದಿಶಾ ಅವರಿಗೆ ಧೈರ್ಯ ತುಂಬಿ, ತನ್ನ ಮನೆಯಲ್ಲೇ ಉಳಿಸಿಕೊಂಡು ಪರೀಕ್ಷೆ ಬರೆಯಲು ಪ್ರೇರೇಪಿಸಿದರು. ತಾಯಿಯ ಅಗಲಿಕೆಯ ನೋವಿದ್ದರೂ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲಿಗೆಯಾಗಿ ಹೊರಹೊಮ್ಮುವ ಮೂಲಕ ದಿಶಾ ಸಾಧನೆ ಮಾಡಿದ್ದಾರೆ.
ಮುಂದೆ ಸಿಎ ಮಾಡುವ ಗುರಿ ಹೊಂದಿರುವ ದಿಶಾ, ಆಳ್ವಾಸ್ ಕಾಲೇಜಿನ ಉಪನ್ಯಾಸಕ ವಿದ್ಯಾರ್ಥಿ ಸ್ನೇಹಿ ಬೋಧನೆ, ಕಲಿಕೆಗೆ ಪೂರಕ ವಾತಾವರಣ, ಸಿಲೆಬಸ್ ಬೇಗ ಮುಗಿಸಿರುವುದು, ನಿರಂತರವಾಗಿ ಪೂರಕ ಪರೀಕ್ಷೆಗಳನ್ನು ಮಾಡಿರುವುದು ಸಾಧನೆ ಮಾಡಲು ಪೂರಕವಾಯಿತು ಎಂದು ತಿಳಿಸಿದ್ದಾರೆ.
