ಲೋಕಬಂಧು ನ್ಯೂಸ್ | ಉಡುಪಿ, ಏ.17
ಕಳೆದ 40 ದಿನಗಳಿಂದ ನಡೆಯುತ್ತಿರುವ ಪರವಾನಿಗೆ ಭೂಮಾಪಕರ ಮುಷ್ಕರದಿಂದ ಕಂದಾಯ ಇಲಾಖೆಗೆ ಸಂಬಂಧಿತ ಕಾರ್ಯಗಳು ಸ್ಥಗಿತಗೊಂಡು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಆ ಬಗ್ಗೆ ರಾಜ್ಯ ಸರಕಾರ ತಕ್ಷಣ ಕ್ರಮ ವಹಿಸುವಂತೆ ಮುಖ್ಯಮಂತ್ರಿಯನ್ನು ಶಾಸಕ ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ರಾಜ್ಯದಾದ್ಯಂತ ಪರವಾನಿಗೆ ಭೂಮಾಪಕರು ಕಳೆದ 40 ದಿನಗಳಿಂದ ಮುಷ್ಕರದಲ್ಲಿ ತೊಡಗಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಭೂಮಾಪನ, ಸರ್ವೇ, ಪಹಣಿ ತಿದ್ದುಪಡಿ, ಹದ್ದುಬಸ್ತು, ಖಾತೆ ಬದಲಾವಣೆ ಸೇರಿದಂತೆ ಜಮೀನು ಸಂಬಂಧಿತ ಅನೇಕ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಅದರಿಂದ ರೈತರು, ಬಡಜನರು, ಮನೆ ನಿರ್ಮಾಣಕ್ಕೆ ಸಾಲ ಪಡೆಯುವವರು ಹಾಗೂ ಸಾಮಾನ್ಯ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದಾದ್ಯಂತ ಸುಮಾರು 6 ಸಾವಿರ ಪರವಾನಿಗೆ ಭೂಮಾಪಕರು, ಉಡುಪಿ ಜಿಲ್ಲೆಯಲ್ಲಿ 118 ಮಂದಿ ಹಾಗೂ ಉಡುಪಿ ತಾಲೂಕಿನಲ್ಲಿ 22 ಮಂದಿ ಮುಷ್ಕರ ನಿರತರಾಗಿದ್ದಾರೆ. ಸಾರ್ವಜನಿಕರು ದಿನನಿತ್ಯ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಉಡುಪಿ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಭೂಮಾಪನ ಅರ್ಜಿಗಳ ವಿಲೇವಾರಿ ಬಾಕಿ ಇದ್ದು ವಿಶೇಷವಾಗಿ ಉಡುಪಿ ತಾಲೂಕಿನಲ್ಲಿ 350ಕ್ಕೂ ಅಧಿಕ ಭೂಮಾಪನ ಅರ್ಜಿಗಳು ಬಾಕಿಯಾಗಿದೆ. ರೈತರು, ಜಮೀನು ಖರೀದಿ/ ಮಾರಾಟ ಮಾಡುವವರು, ವಾರಸುದಾರಿಕೆ ದಾಖಲೆ ಮಾಡಿಸಿಕೊಳ್ಳುವವರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳು ಆರ್ಥಿಕ ಮತ್ತು ಆಡಳಿತಾತ್ಮಕ ತೊಂದರೆ ಅನುಭವಿಸುತ್ತಿದ್ದಾರೆ.
ಆದ್ದರಿಂದ ಈ ಗಂಭೀರ ಸಮಸ್ಯೆಯನ್ನು ತಕ್ಷಣ ಪರಿಗಣಿಸಿ ಪರವಾನಿಗೆ ಭೂಮಾಪಕರೊಂದಿಗೆ ಮಾತುಕತೆ ನಡೆಸಿ ಅವರ ನ್ಯಾಯಸಮ್ಮತ ಬೇಡಿಕೆ ಈಡೇರಿಸಿ, ಮುಷ್ಕರವನ್ನು ಶೀಘ್ರ ಅಂತ್ಯಗೊಳಿಸುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಭೂಮಾಪನ ಸೇವೆಗಳು ಮರುಪ್ರಾರಂಭವಾಗುವಂತೆ ತುರ್ತು ಮಧ್ಯಪ್ರವೇಶ ಮಾಡಿ ಜನರ ಸಂಕಷ್ಟ ನಿವಾರಿಸುವಂತೆ ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ.
