ಉಡುಪಿ ನೂತನ ಬಿಷಪ್ ಪೀಠಾರೋಹಣ ಮಹೋತ್ಸವ ಸಿದ್ದತೆ ಪೂರ್ಣ

ಲೋಕಬಂಧು ನ್ಯೂಸ್ | ಉಡುಪಿ, ಏ.18
ಉಡುಪಿ ಕ್ರೈಸ್ತ ಧರ್ಮಕ್ಷೇತ್ರದ ದ್ವಿತೀಯ ಬಿಷಪ್ ಡಾ.ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಅವರ ಪಟ್ಟಾಭಿಷೇಕ ಹಾಗೂ ಪೀಠಾರೋಹಣ ಸಮಾರಂಭ ಏ.20ರಂದು ಸೋಮವಾರ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಲಿದ್ದು ಸಕಲ ಸಿದ್ಧತೆ ಪೂರ್ಣಗೊಂಡಿವೆ.
ಸಂತೆಕಟ್ಟೆ ಬಸ್ ನಿಲ್ಡಾಣದಿಂದ ಮಿಲಾಗ್ರಿಸ್ ಪ್ರಧಾನ ಚರ್ಚ್‌ಗೆ ತೆರಳುವ ಮಾರ್ಗವನ್ನು ಸಂಪೂರ್ಣವಾಗಿ ಅಲಂಕರಿಸಲಾಗಿದ್ದು ಬೃಹತ್ ಗಾತ್ರದ  ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ದಾರಿಯುದ್ದಕ್ಕೂ ಶುಭಾಶಯ ಕೋರುವ ಫ್ಲೆಕ್ಸ್ ಅಳವಡಿಸಲಾಗಿದೆ.
ಕಾರ್ಯಕ್ರಮದ ಪ್ರಧಾನ ವೇದಿಕೆ ಸಿದ್ದಗೊಂಡಿದ್ದು ಅದರಲ್ಲಿ ನೂತನ ಧರ್ಮಾಧ್ಯಕ್ಷರ ಪಟ್ಟಾಭಿಷೇಕ ಹಾಗೂ ಪೀಠಾರೋಹಣ ಸಮಾರಂಭ ಪವಿತ್ರ ಬಲಿಪೂಜೆಯೊಂದಿಗೆ ನೆರವೇರಲಿದೆ. ವೇದಿಕೆಯಲ್ಲಿ ಸುಮಾರು 35 ಧರ್ಮಾಧ್ಯಕ್ಷರು ಆಸೀನರಾಗಲಿದ್ದು ಬಲಿಪೂಜೆ ಬಳಿಕದ ಸಾರ್ವಜನಿಕ ಅಭಿನಂದನ ಸಮಾರಂಭ ಅದೇ ವೇದಿಕೆಯಲ್ಲಿ ನಡೆಯಲಿದೆ.
ಭಕ್ತಾದಿಗಳಿಗೆ ಕುಳಿತುಕೊಳ್ಳಲು ಬೃಹತ್ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ ವ್ಯವಸ್ಥೆ ಜೊತೆಗೆ ಕುಡಿಯವ ನೀರಿನ ವ್ಯವಸ್ಥೆ ಮಾಡಲಾಗಿದೆ.


ಧರ್ಮಾಧ್ಯಕ್ಷರ ದೀಕ್ಷಾ ಸಮಾರಂಭ ಅತ್ಯಂತ ಪವಿತ್ರ ಕಾರ್ಯಕ್ರಮವಾಗಿದ್ದು ಆ ವೇಳೆ ವೇದಿಕೆಯ ಬಳಿ ಕಾರ್ಯಕ್ರಮದ ಪಾವಿತ್ರ್ಯತೆ ಕಾಪಾಡುವ ಸಲುವಾಗಿ ಸಾರ್ವಜನಿಕರಿಗೆ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿ ನಿಷೇಧಿಸಲಾಗಿದೆ. ಮಾಧ್ಯಮದವರಿಗೆ ಫೋಟೊ ಮತ್ತು ವೀಡಿಯೊಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಧರ್ಮಾಧ್ಯಕ್ಷರ ದೀಕ್ಷಾ ಸಮಾರಂಭದ ನೇರಪ್ರಸಾರ ಮಾಡಲಾಗುತ್ತಿದ್ದು ವಿದೇಶದಲ್ಲಿರುವ ಕ್ರೈಸ್ತ ಭಕ್ತಾದಿಗಳು ಕೂಡಾ ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.


ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳ ಮೂಲಕ ಭರದಿಂದ ಸಿದ್ಧತೆ ನಡೆದಿದ್ದು ಕೊನೆಯ ಹಂತದ ಕೆಲಸಗಳು ಮಾತ್ರ ಬಾಕಿ ಇವೆ.


ಏ.20ರಂದು ಬೆಳಿಗ್ಗೆ 8.15ಕ್ಕೆ ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ, ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಹಾಗೂ ಉಡುಪಿ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೊ, ಭಾರತ ಮತ್ತು ನೇಪಾಳದ ಅಪೊಸ್ತೊಲಿಕ್ ನುನ್ಸಿಯೋ (ಪೋಪ್ ಅವರ ವ್ಯಾಟಿಕನ್ ರಾಯಭಾರಿ) ಡಾ.ಲಿಯೋಪೋಲ್ಡೊ ಗಿರೆಲ್ಲಿ‌ ಹಾಗೂ ನೂತನ ಧರ್ಮಾಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಅವರನ್ನು ಮಿಲಾಗ್ರಿಸ್ ಚರ್ಚ್ ಪ್ರವೇಶ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದ ಬಳಿಕ ಧರ್ಮಾಧ್ಯಕ್ಷರ ಪಟ್ಟಾಭಿಷೇಕ ಹಾಗೂ ಪೀಠಾರೋಹಣ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.


ಕಾರ್ಯಕ್ರಮದಲ್ಲಿ 250ಕ್ಕೂ ಅಧಿಕ ಧರ್ಮಗುರುಗಳು, ಅಷ್ಟೇ ಸಂಖ್ಯೆ ಧರ್ಮಭಗಿನಿಯರು ಹಾಗೂ ಸುಮಾರು 6 ಸಾವಿರ ಮಂದಿ ಸಾರ್ವಜನಿಕರು, ವಿವಿಧ ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದು, ಅಚ್ಚುಕಟ್ಟಿನ ವ್ಯವಸ್ಥೆಯನ್ನು ಸ್ವಯಂ ಸೇವಕರು ಹಾಗೂ ಪೊಲೀಸ್ ಇಲಾಖೆ ನೆರವಿನೊಂದಿಗೆ ಮಾಡಲಾಗಿದೆ. ವಾಹಗಳ ವ್ಯವಸ್ಥಿತ ಪಾರ್ಕಿಂಗ್'ಗೆ ವಿವಿಧ ಸ್ಥಳಗಳನ್ನು ಗುರುತಿಸಲಾಗಿದೆ.