ಲೋಕಬಂಧು ನ್ಯೂಸ್ | ಉಡುಪಿ, ಏ.17
ಪ್ರಕೃತಿದತ್ತ ಸಹಜ ಸೌಂದರ್ಯ ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸಕ್ರಿಯ ಪಾಲುದಾರರು ಪರಿಸರ ಸ್ನೇಹಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಪೂರಕ ನೀಲನಕಾಶೆ ಸಿದ್ಧಪಡಿಸಿ, ಶೀಘ್ರವಾಗಿ ಪ್ರಸ್ತುತಪಡಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಕುರಿತಾಗಿ ಜಿಲ್ಲೆಯ ಪ್ರವಾಸೋದ್ಯಮ ಪಾಲುದಾರರೊಂದಿಗೆ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕಡಲ ಕಿನಾರೆಗಳು, ರಮಣೀಯ ಪಶ್ಚಿಮ ಘಟ್ಟಗಳ ಶ್ರೇಣಿಗಳು, ಕಾನನಗಳು, ಝರಿಗಳು ಹಾಗೂ ಧಾರ್ಮಿಕ ಕ್ಷೇತ್ರಗಳು ಪ್ರಮುಖವಾಗಿದ್ದು ಸಾವಿರಾರು ಪ್ರವಾಸಿಗರು ಆಗಮಿಸಿ ಜಿಲ್ಲೆಯ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ. ಯಾವುದೇ ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವ ಮುನ್ನ ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ವಸತಿ ಮತ್ತಿತರ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತುನೀಡುವ ರೀತಿಯಲ್ಲಿ ಯೋಜನೆ ರೂಪಿಸಿ ಪ್ರಸ್ತುತಪಡಿಸಲು ಮೊದಲ ಆದ್ಯತೆ ನೀಡಬೇಕು.
ಕಳೆದ ಸಭೆಯಲ್ಲಿ ಸೂಚಿಸಿದಂತೆ ರಚಿಸಲಾದ ಪಾಲುಗಾರ ತಂಡವನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವಂತೆ ಆಸಕ್ತ ವಿಷಯಗಳ ಬಗ್ಗೆ ವಿಸ್ತೃತ ವರದಿಯೊಂದಿಗೆ ಏ.10ರಂದು ಪ್ರಸ್ತುತಪಡಿಸಲು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರಸ್ತುತ ಇರುವ ಪ್ರವಾಸಿ ತಾಣಗಳ ಜೊತೆಗೆ ತೆರೆಮರೆಯಲ್ಲಿರುವ ಪ್ರವಾಸಿ ತಾಣಗಳ ವಿವರ, ತಂಗಲು ಅನುಕೂಲವಾಗುವಂತೆ ಸ್ಥಳೀಯವಾಗಿ ಲಭ್ಯವಿರುವ ವಸತಿ ವ್ಯವಸ್ಥೆ ಮತ್ತಿತರ ಮಾಹಿತಿ ಪ್ರವಾಸಿಗರಿಗೆ ದೊರೆತಲ್ಲಿ ಇನ್ನೂ ಹೆಚ್ಚಿನ ಸಮಯವನ್ನು ಜಿಲ್ಲೆಯಲ್ಲಿ ಕಳೆಯಲು ಅವರು ಬಯಸುತ್ತಾರೆ. ಅದರಿಂದ ಆದಾಯ ಹೆಚ್ಚುವುದರೊಂದಿಗೆ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಇನ್ನಷ್ಟು ವಿಸ್ತರಣೆಗೊಳ್ಳಲಿದೆ. ಜಿಲ್ಲೆಯ ಪಾಲುದಾರರು ಅದಕ್ಕೆ ಹೆಚ್ಚಿನ ಒತ್ತುನೀಡಬೇಕಿದೆ ಎಂದರು.
ಜಿಲ್ಲೆಯಲ್ಲಿ ಹೊಸ ಪ್ರವಾಸಿ ಸ್ಥಳಗಳನ್ನು ಅನ್ವೇಷಿಸಿ ಅದನ್ನು ಪ್ರವಾಸಿಗರ ಎದುರಿಗೆ ತೆರೆದಿರಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕಿದೆ. ಜಿಲ್ಲೆಗೆ ಆಗಮಿಸುವ ಶೇ. 90ರಷ್ಟು ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸೋದ್ಯಮದ ಬಗ್ಗೆ ಮಾಹಿತಿ ಇಲ್ಲ. ಫೇಸ್ ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳ ವಿವರ ಪ್ರವಾಸಿಗರಿಗೆ ಸುಲಭವಾಗಿ ದೊರಕುವಂತಾಗಬೇಕು ಎಂದರು.
ಪ್ರವಾಸೋದ್ಯಮ ತಾಣಗಳಲ್ಲಿ ಉಡುಪಿ ಜಿಲ್ಲೆ ಅತ್ಯುತ್ತಮ ಪ್ರವಾಸಿ ತಾಣವಾಗಿದ್ದು ಜಿಲ್ಲೆಯ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳು, ಜಿಲ್ಲೆಗೆ ಇರುವ ವೈಶಿಷ್ಟ್ಯತೆ, ಧಾರ್ಮಿಕತೆ, ಆಹಾರ ಶೈಲಿ ಮತ್ತಿತರ ವಿಶೇಷತೆಗಳ ಬಗ್ಗೆ ಸರಿಯಾದ ಪ್ರಚಾರ ದೊರೆತಲ್ಲಿ ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಹಿರಿಮೆ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವ ರೀತಿಯಲ್ಲಿ ಕೊಡುಗೆ ನೀಡಬಹುದು ಎಂಬ ಬಗ್ಗೆ ಸಕ್ರಿಯ ಪಾಲುದಾರರು ವಿನೂತನ ಆವಿಷ್ಕಾರಗಳ ದಾಖಲೆಗಳನ್ನು ಸಿದ್ಧಪಡಿಸಲು ಗಮನಹರಿಸಬೇಕಿದೆ ಎಂದರು.
ಸಭೆಯಲ್ಲಿ ಉಡುಪಿ ಜಿಲ್ಲೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಂ., ಜಿಲ್ಲೆಯ ಪ್ರವಾಸೋದ್ಯಮ ಪಾಲುದಾರರು ಮೊದಲಾದವರಿದ್ದರು.