ಕೊಚ್ಚಿ ಮಾದರಿಯಲ್ಲಿ ವಾಟರ್ ಮೆಟ್ರೋ ನಿರ್ಮಾಣ ಪ್ರಸ್ತಾಪ

ಲೋಕಬಂಧು ನ್ಯೂಸ್ | ಉಡುಪಿ, ಏ.9
ಕೇರಳದ ಕೊಚ್ಚಿ ವಾಟರ್ ಮೆಟ್ರೋ ಮಾದರಿಯಲ್ಲಿ ಕರ್ನಾಟಕ ಕರಾವಳಿಯ ನಗರಗಳಲ್ಲಿ ಸಮಾನ ವ್ಯವಸ್ಥೆ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದ್ದು, ಈ ಸಂಬಂಧ ಕೊಚ್ಚಿ ವಾಟರ್ ಮೆಟ್ರೋ ತಂಡ ಕರಾವಳಿಯ ಮೂರೂ ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ತಂಡ ಶೀಘ್ರದಲ್ಲಿ ಪ್ರಾಥಮಿಕ ವರದಿ ನೀಡುವ ನಿರೀಕ್ಷೆ ಇದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದಲ್ಲಿ ಗುರುವಾರ ನಡೆದ ಸಂಘದ ಮಾಸಿಕ ಪತ್ರಿಕೆ ಸನ್ಮತಿ ಮಾರ್ಚ್ ತಿಂಗಳ ಸಂಚಿಕೆ ಅನಾವರಣಗೊಳಿಸಿ 'ತಿಂಗಳ ಅಂಗಳ' ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಪ್ರಸ್ತಾವಿತ ಈ ಯೋಜನೆ ಸಂಬಂಧ ಮುಂದಿನ ಹಂತದಲ್ಲಿ ತಾಂತ್ರಿಕವಾಗಿ ಟ್ರಾಫಿಕ್ ಸರ್ವೇ ನಡೆಸಿ ವಿಸ್ತೃತ ಯೋಜನಾ ವರದಿ ತಯಾರಿಸಲಾಗುವುದು. ಆ ಕುರಿತು ಮೂರೂ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದರು.


ಉಡಾನ್ ಯೋಜನೆಯಡಿ ಮಂಗಳೂರು- ಮರವಂತೆ- ಗೋವಾ ಕರಾವಳಿ, ಮಂಗಳೂರು-ಕೊಚ್ಚಿ ಮತ್ತು ಮಂಗಳೂರು-ಮೈಸೂರು (ಕಬಿನಿ ಪ್ರದೇಶ) ಸಂಪರ್ಕಿಸುವ ವಾಟರ್ ಏರೋಡ್ರೋಮ್'ಗಳಿಗೆ ಅನುಮೋದನೆ ನೀಡಲಾಗಿದೆ. ಭಾರೀ ವಾಹನಗಳ ಸಂಚಾರದಿಂದ ಉಂಟಾಗುವ ನಗರ ಸಂಚಾರ ದಟ್ಟಣೆ ಕಡಿಮೆ ಮಾಡಲು ಟ್ರಕ್'ಗಳನ್ನು ನದಿ ಅಥವಾ ಸಮುದ್ರ ಮಾರ್ಗದ ಮೂಲಕ ಸಾಗಿಸುವ ರೋ-ರೋ ಫೆರ್ರಿ ಸೇವೆ ಪರಿಚಯಿಸುವ ಯೋಜನೆ ಇದೆ ಎಂದರು.


ಕರಾವಳಿ ಅಭಿವೃದ್ಧಿ ಮಂಡಳಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಸಮನ್ವಯಗೊಳಿಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸುತ್ತಿದೆ. ಬಹುಸಂಪರ್ಕ ವ್ಯವಸ್ಥೆ, ಪ್ರವಾಸೋದ್ಯಮ, ಮೀನುಗಾರಿಕೆ, ಕೈಗಾರಿಕೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ಯೋಜನೆ ರೂಪಿಸಲಾಗುತ್ತಿದೆ. ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ರಸ್ತೆ ನಿರ್ಮಾಣ ಯೋಜನೆ ರೂಪಿಸಲಾಗಿದ್ದು, ಅದನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೂಲಕ ನಡೆಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ ಎಂದು ಗಫೂರ್ ತಿಳಿಸಿದರು.


ಮಂಡಳಿಗೆ 100- 500 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ ಸಂದರ್ಭ ಮಂಡಳಿಯಲ್ಲಿದ್ದ 10 ಕೋಟಿ ರೂ. ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಮತ್ತೆ 10 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.


ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ಇದ್ದರು.


ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ಪತ್ರಿಕಾ ಭವನ ಸಮಿತಿ ಸದಸ್ಯ ಅಜಿತ್ ಆರಾಡಿ ವಂದಿಸಿದರು. ಪತ್ರಕರ್ತ ರಹೀಂ ಉಜಿರೆ ನಿರೂಪಿಸಿದರು.