ಲೋಕಬಂಧು ನ್ಯೂಸ್ | ಬೆಂಗಳೂರು, ಏ.9
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಗುರುವಾರ ಪ್ರಕಟಿಸಿದೆ.
ಉಡುಪಿ ಜಿಲ್ಲೆ (ಶೇ. 93.9ರಷ್ಟು ಫಲಿತಾಂಶ) ದಾಖಲಿಸಿ ಪ್ರಥಮ ಸ್ಥಾನ ಪಡೆದರೆ ದ್ವಿತೀಯ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಪಾಲಾಗಿದೆ. ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಪ್ರಾಪ್ತವಾಗಿದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದಾಗಿದೆ.ಜೊತೆಗೆ, ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂಎಸ್ ಮೂಲಕವೂ ಫಲಿತಾಂಶ ಮಾಹಿತಿ ಕಳುಹಿಸಲಾಗಿದೆ. ಫಲಿತಾಂಶವನ್ನು www. https://karresults.nic.in ನೋಡಬಹುದು.
ಫೆಬ್ರವರಿ 28ರಿಂದ ಮಾರ್ಚ್ 12ರ ವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯಾದ್ಯಂತ 1217 ಕೇಂದ್ರಗಳಲ್ಲಿ ನಡೆದಿತ್ತು. 5,174 ಕಾಲೇಜುಗಳ ಒಟ್ಟು 7.10 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. ಆ ಪೈಕಿ, ವಿಜ್ಞಾನ ವಿಭಾಗದಲ್ಲಿ 2.92 ಲಕ್ಷ, ವಾಣಿಜ್ಯ ವಿಭಾಗದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
