ಲೋಕಬಂಧು ನ್ಯೂಸ್ | ಉಡುಪಿ, ಏ.18
ದೇವರ ಸ್ಮರಣೆಯಿಂದ ಮನದ ಕಲ್ಮಶ ದೂರವಾಗಿ ಆತ್ಮ ಪರಿಶುದ್ದವಾಗಲು ಸಾಧ್ಯ. ಭಕ್ತರಿದ್ದಲ್ಲಿ ದೇವರಿದ್ದಾನೆ. ದೇವರು ಗಾಳಿ, ಪರಿಸರ, ಸಂಪತ್ತು ಸಹಿತ ಎಲ್ಲವನ್ನೂ ನಮಗೆ ಕೊಟ್ಟಿದ್ದಾನೆ. ನಾವು ಭಕ್ತಿ, ಪ್ರೀತಿಯ ಹೊರತು ದೇವರಿಗೆ ಕೊಡಬೇಕಾದ್ದಿಲ್ಲ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ದೇವಳದ ನಾಡೋಜ ಡಾ.ಜಿ.ಶಂಕರ್ ವೇದಿಕೆಯಲ್ಲಿ ಶುಕ್ರವಾರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ
ಮಾತನಾಡಿದರು.
ಆಸ್ತಿ, ಬಂಗಾರ, ಭೂಮಿ ನಮ್ಮಲ್ಲಿ ಎಷ್ಟೇ ಇದ್ದರೂ ಹೃದಯದಲ್ಲಿ ನೆಲೆಸಿದ ದೇವರನ್ನು ನಿತ್ಯ ಸ್ಮರಿಸದೇ ಇದ್ದರೆ ಬದುಕು ವ್ಯರ್ಥ ಎಂದವರು ಹೇಳಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ ಧಾರ್ಮಿಕ ಕೇಂದ್ರಗಳು ಧಾರ್ಮಿಕತೆ ಕೊತೆಗೆ ಸರ್ವಧರ್ಮ ಸಹಿಷ್ಣುತೆ, ಸಾಮಾಜಿಕ ಸಾಮರಸ್ಯಕ್ಕೆ ಕೊಡುಗೆ ನೀಡುತ್ತಿವೆ. ಕರಾವಳಿಯ ಮಸೀದಿ, ಚರ್ಚ್, ದರ್ಗಾ, ದೇವಾಲಯಗಳಿಗಾಗಿ ಹಿಂದೂ, ಮುಸ್ಲಿಂ, ಕ್ರೈಸ್ತರು ಪರಸ್ಪರ ಸೌಹಾರ್ದದ ಮಾದರಿ ಕೆಲಸ ಮಾಡಿದ್ದಾರೆ ಎಂದರು.
ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಉಪಾಧ್ಯ, ಮಾಂಡವಿ ಬಿಲ್ಡರ್ಸ್'ನ ಜೇಸನ್ ಡಯಾಸ್, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಹೇಶ್ ಠಾಕೂರ್, ಶಾಂತಿ ಸಾಗರ್ ಹೋಟೆಲ್ ಗ್ರೂಪ್'ನ ಪ್ರಭಾಕರ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ದೇವಳ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೇಖರ್ ಶೆಟ್ಟಿ, ಶಮಿತಾ ಎಸ್. ಭಂಡಾರಿ, ವಿದ್ಯಾಲತಾ ಶೆಟ್ಟಿ, ದಿನೇಶ್ ಪುತ್ರನ್, ಯು.ಸುದೇಶ್ ಶೇಟ್, ಎಂ.ಪ್ರಭಾಕರ್ ಶೆಟ್ಟಿ, ರಾಜೇಶ್ ಬಿ. ಉಪಸ್ಥಿತರಿದ್ದರು.
ಶ್ರೀದೇವಿ ಕುಂದರ್ ಪ್ರಾರ್ಥಿಸಿದರು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಮಾಧವ ಪೂಜಾರಿ ಸ್ವಾಗತಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಪಿ.ವಾಸುದೇವ ಉಪಾಧ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
