ಜನರಲ್ಲಿ ಭಕ್ತಿಭಾವ ಮೂಡಿಸಲು ಧಾರ್ಮಿಕ ಕಾರ್ಯಕ್ರಮ ಸಹಕಾರಿ

ಲೋಕಬಂಧು ನ್ಯೂಸ್ ಉಡುಪಿ, ಏ.19
ದೈವ- ದೇವಾಲಯಗಳ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವ, ನಾಗಮಂಡಲ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಕ್ತಿ ಮೂಡಿಸುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಮಣಿಪಾಲ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್ ಹೇಳಿದರು.ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕ್ರೈಸ್ತರು ಪ್ರತೀ ರವಿವಾರ ಚರ್ಚ್‌ಗೆ ಹೋಗುತ್ತಾರೆ. ಮುಸ್ಲಿಮರು ಶುಕ್ರವಾರ ಮಸೀದಿಗೆ ಹೋಗುತ್ತಾರೆ. ಆದರೆ, ಹಿಂದೂಗಳು ಈ ರೀತಿ ಯಾವುದೋ ಒಂದು ದಿನ ನಿರ್ದಿಷ್ಟ ದೇವಸ್ಥಾನಕ್ಕೆ ಎಲ್ಲರೂ ಹೋಗುತ್ತಾರೆ ಎನ್ನುವುದಿಲ್ಲ. ಇಂಥ ಧಾರ್ಮಿಕ ಕಾರ್ಯಕ್ರಮಗಳು ಹಿಂದೂಗಳನ್ನು ದೇವಸ್ಥಾನಕ್ಕೆ ಹೋಗುವಂತೆ ಮಾಡುತ್ತದೆ ಎಂದರು.


ದೈವಭಕ್ತಿ, ಶಿಕ್ಷಣ ಹಾಗೂ ಆರೋಗ್ಯ ಎಲ್ಲರಿಗೂ ಆವಶ್ಯಕ. ಈ ನಿಟ್ಟಿನಲ್ಲಿ ಡಾ.ಜಿ.ಶಂಕರ್ ಅವರು ಬಡ ರೋಗಿಗಳಿಗೆ ಸಹಾಯಹಸ್ತ ಚಾಚುವ ಬಹುದೊಡ್ಡ ಕಾರ್ಯಗಳನ್ನು ದಶಕಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಈ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯದಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ ಎಂದರು.


ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯ ಕುಮಾರ್‌ ಸರಳತ್ತಾಯ ಮಾತನಾಡಿ, ಹರಿ ಮತ್ತು ಹರನಿಗೆ ಸಂಯೋಜಿತ ಆಧಾರದಲ್ಲಿ ಪೂಜೆ ನಡೆಯುವ ಕ್ಷೇತ್ರವೇ ಉಡುಪಿ. ಮಹಾರುದ್ರ ದೇವರು ಪರಮ ವೈಷ್ಣವರು. ಪರ್ಯಾಯ ಪೀಠ ಏರುವ ಶ್ರೀಪಾದರು ರುದ್ರದೇವರ ದರ್ಶನ ಮಾಡಿಯೇ ಕೃಷ್ಣಮಠ ಪ್ರವೇಶ ಮಾಡುತ್ತಾರೆ. ಮನುಷ್ಯನ ಮಾನಸಿಕ ಆರೋಗ್ಯ ಚೆನ್ನಾಗಿರಬೇಕಾದರೆ ರುದ್ರದೇವರ ಆರಾಧನೆ ಮಾಡಬೇಕು ಎಂದರು.


ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡುವ ಇಂಥ ಕಾರ್ಯಗಳು ಹೆಚ್ಚಬೇಕು ಮತ್ತು ಮಾನವೀಯ ಸಂಬಂಧಗಳನ್ನು ಇನ್ನಷ್ಟು ಬೆಸೆಯುವ ಕಾರ್ಯ ಆಗಬೇಕು ಎಂದರು.


ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು.


ಬ್ರಹ್ಮಕಲಶೋತ್ಸವ ಸಮಿತಿ ಸಲಹೆಗಾರ ಹಾಗೂ ಶ್ಯಾಮಿಲಿ ಸಮೂಹ ಸಂಸ್ಥೆಗಳ ಪ್ರವರ್ತಕ ಡಾ.ಜಿ. ಶಂಕರ್, ಉದ್ಯಮಿಗಳಾದ ಕೆ. ಉದಯ ಕುಮಾರ್‌ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಯೋಗೀಶ್ ವಿ. ಶೆಟ್ಟಿ, ವಿನಿತ್ ಅಮೀನ್, ಹರಿಪ್ರಸಾದ್ ರೈ, ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಗೋಪಾಲ ಸಿ. ಬಂಗೇರ, ತೋಟದಮನೆ ದಿವಾಕರ ಶೆಟ್ಟಿ, ಗಣನಾಥ ಹೆಗ್ಡೆ, ಜಿಲ್ಲಾ ಧಾರ್ಮಿಕ ಪರಿಷತ್'ನ ಕೃಷ್ಣಮೂರ್ತಿ, ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ ಸುವರ್ಣ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ಆಡಳಿತ ಸಮಿತಿ ಸದಸ್ಯರಾದ ದಿನೇಶ್ ಪುತ್ರನ್, ಎಂ. ಪ್ರಭಾಕರ ಶೆಟ್ಟಿ, ಶೇಖರ ಶೆಟ್ಟಿ, ವಿದ್ಯಾಲತಾ ಶೆಟ್ಟಿ, ಶಮಿತಾ ಎಸ್. ಭಂಡಾರಿ, ಸುದೇಶ್ ಶೇಟ್, ರಾಜೇಶ್ ಬಿ. ಉಪಸ್ಥಿತರಿದ್ದರು.


ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ ಬನ್ನಂಜೆ ಸ್ವಾಗತಿಸಿ, ಪ್ರಧಾನ ಅರ್ಚಕ ವಾಸುದೇವ ಉಪಾಧ್ಯ ಪ್ರಸ್ತಾವನಗೈದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ವಂದಿಸಿದರು.