ಮನುಷ್ಯನ ಅವಗುಣ ತಿದ್ದಿಕೊಳ್ಳಲು ದಾಸ ಸಾಹಿತ್ಯ ಪೂರಕ

ಲೋಕಬಂಧು ನ್ಯೂಸ್ | ಉಡುಪಿ, ಏ.19
ದಾಸ ಸಾಹಿತ್ಯ ಭಗವವಂತನ ಅರಿವು ಮೂಡಿಸುವ ಜೊತೆಗೆ ನಮ್ಮಲ್ಲಿರುವ ಅವಗುಣಗಳನ್ನು ತಿದ್ದಿಕೊಳ್ಳಲು ಸಹಕಾರಿ. ಶಾಸ್ತ್ರಾರ್ಥಗಳನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ದಾಸ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದ್ದು, ಅವುಗಳನ್ನು ಅರ್ಥೈಸಿಕೊಂಡು ಅನುಸರಿಸುವುದರಿಂದ ದೇವರ ಗುಣವಿಶೇಷಗಳ ಅರಿವಿನ ಜೊತೆಗೆ ನಮ್ಮ ಮನಃಸ್ಥಿತಿಯೂ ಬದಲಾಗುತ್ತದೆ ಎಂದು ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಅದಮಾರು ಮಠ ಆಶ್ರಯದ ಶ್ರೀಕೃಷ್ಣ ಸೇವಾ ಬಳಗದ ವತಿಯಿಂದ ಶನಿವಾರ ನಗರದ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆದ ವಿಶ್ವಾರ್ಪಣಂ ಚಿಂತನ ಮಂಥನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ತಿಳಿದು ಆಚರಿಸು- ಆಚರಿಸಿ ತಿಳಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಖ್ಯಾತ ಗಾಯಕ ವಿದ್ಯಾಭೂಷಣ ಅವರ ದಾಸರ ಪದಗಳಿಗೆ ವಿದ್ವಾಂಸರಾದ ಬೆಂಗಳೂರು ಜಯಸಿಂಹ ಆಚಾರ್ಯ ಮತ್ತು ಕೃಷ್ಣರಾಜ ಕುತ್ಪಾಡಿ ಅವರು ಅರ್ಥ ಸಹಿತ ವಿಶ್ಲೇಷಿಸಿದರು. ಪ್ರಕಾಶ ಮಲ್ಪೆ ನಿರ್ವಹಿಸಿದರು.


ಪ್ರಶಸ್ತಿ ಪ್ರದಾನ
ಈ ಸಂದರ್ಭದಲ್ಲಿ ಕಟೀಲು ಮೇಳದ ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಭಟ್ ಅವರಿಗೆ 50 ಸಾವಿರ ರೂ. ನಗದು ಸಹಿತ ಶ್ರೀನರಹರಿತೀರ್ಥ ಪ್ರಶಸ್ತಿ ನೀಡಿ ಗೌರವಿಸಿದರು.


ಬೆಂಗಳೂರು ವೆಂಕಟ್ರಮಣ ಸೋಮಯಾಜಿ ಅವರನ್ನು ಶ್ರೀಪಾದರು ಗೌರವಿಸಿದರು.


ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ್ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕ ಶಿವಕುಮಾರ್ ಅಳಗೋಡು ಸಂಮಾನಪತ್ರ ವಾಚಿಸಿದರು. ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಎ.ಪಿ. ಭಟ್ ಮತ್ತು ವಿಶ್ರಾಂತ ಪ್ರಾಚಾರ್ಯ ಕೆ. ಸದಾಶಿವ ರಾವ್ ಸಹಕರಿಸಿದರು.


ಬಳಿಕ ಬನ್ನಂಜೆ ಸಂಜೀವ ಸುವರ್ಣ ನೇತೃತ್ವದಲ್ಲಿ ಪೂರ್ಣಪ್ರಜ್ಞ ಯಕ್ಷಗಾನ ಕೇಂದ್ರ ಅದಮಾರು ಮಠ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.